ನರೇಂದ್ರ ಕುಮಾರ್ ಪಿ.ಟಿ ಮಾಸ್ಟರ್. ಅಪರೂಪದಲ್ಲಿ ಅಪರೂಪ ಎನಿಸುವ ವ್ಯಕ್ತಿತ್ವ. ಸಾಧನೆಯೊಂದಿಗೆ ಸಂತೃಪ್ತ ಜೀವನ ನಡೆಸಿ ಸಹಕಾರ ಮನೋಭಾವದಿಂದ ಸಹಾಯದ ಹಸ್ತ ಚಾಚುತ್ತಿದ್ದ ನರೇಂದ್ರ ಕುಮಾರ್ ಅವರತ್ತ ಕಾಲನೇ ಹಸ್ತ ಚಾಚಿಬಿಟ್ಟ. ದೈಹಿಕ ಶಿಕ್ಷಕರಾಗಿ ಕ್ರೀಡಾ ಕ್ಷೇತ್ರದಲ್ಲಿ , ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ ಗಣನೀಯ ಸೇವೆ ಸಲ್ಲಿಸಿದ ಆತ್ಮೀಯತೆಯ ಸಾಕಾರಮೂರ್ತಿ ನಮ್ಮನ್ನು ಅಗಲಿದ್ದಾರೆ. ಅವರ ವಿದ್ಯಾರ್ಥಿಗಳು ಮತ್ತು ಹತ್ತಿರದಿಂದ ಬಲ್ಲವರಿಂದ ಕೇಳಿ ತಿಳಿದುಕೊಂಡಿರುವ ಹಾಗೂ ನಾನು ಅವರ ಜೊತೆಯಾಗಿ ಇದ್ದು ಅವರ ಕುರಿತಾಗಿ ಆರ್ಜಿಸಿದ ಜೀವನ ಪಥವನ್ನು ಮೆಲುಕು ಹಾಕಿ ಮೂಡಿದ ಪದಪುಂಜಗಳ ಮುಖಾಂತರ ಅಗಲಿದ ಚೇತನಕ್ಕೆ ನನ್ನ ನಮನ ಅರ್ಪಿಸುತ್ತಿದ್ದೇನೆ.

ತಂದೆ ಜಿನರಾಜ ಶಾಸ್ತ್ರಿಗಳು ನ್ಯಾಯತೀರ್ಥ ಬಿರುದಾಂಕಿತ ಜೈನ ಧರ್ಮದ ಮಹಾವಿದ್ವಾಂಸ. ತಾಯಿ ಸುನಂದಾ ದೇವಿ. 04-10-1944ರಂದು ಜನನ. ಶಿರ್ತಾಡಿಯಿಂದ ವಿದ್ಯಾರ್ಜನೆಗಾಗಿ ಧರ್ಮಸ್ಥಳಕ್ಕೆ ಬಂದು ತನ್ನ ಹತ್ತನೇ ತರಗತಿಯ ವಿದ್ಯಾಭ್ಯಾಸ ಮುಗಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಉದ್ಯೋಗ(ಅಂಚೆ) ಆರಂಭಿಸಿದರು. ಬಳಿಕ ಬೆಂಗಳೂರಿನಲ್ಲಿ ಶಾರೀರಿಕ ಶಿಕ್ಷಣ ತರಬೇತಿ ಮುಗಿಸಿ ದೈಹಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು.
ಯಕ್ಷಗಾನದಲ್ಲಿ ನರೇಂದ್ರ ಮಾಸ್ಟರ್
ಪರಿಸರದ ಪ್ರಭಾವದಿಂದ ಬಾಲ್ಯದಲ್ಲಿಯೇ ಯಕ್ಷಗಾನದತ್ತ ಆಕರ್ಷಣೆ. ಯಕ್ಷಗಾನ ವ್ಯವಸಾಯಕ್ಕೆ ಧರ್ಮಸ್ಥಳವು ಮೂಲ ತಾಣವಾಗಿತ್ತು.1963 ರ ಮಳೆಗಾಲದ ಸಮಯದಲ್ಲಿ ಧರ್ಮಸ್ಥಳ ಮೇಳದ ವೇಷಭೂಷಣಗಳನ್ನು ತಯಾರಿಸುತ್ತಿದ್ದ ಕುಂಬಳೆ ರಾಮಚಂದ್ರ ಇವರಲ್ಲಿ ನಾಟ್ಯಾಭ್ಯಾಸ. ಬಳಿಕ ರಂಗ ಪ್ರವೇಶ. ಮುಂದೆ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಗುರುಗಳಾಗಿದ್ದ ಪಡ್ರೆ ಚಂದು, ಗೋವಿಂದ ಭಟ್ಟರಿಂದಲೂ ಒಂದಷ್ಟು ಕಲಿಕೆ. 1965ರಲ್ಲಿ ಕೆಲ ಸಮಯ ಬೆಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ. ಶಾರೀರಿಕ ಶಿಕ್ಷಕರಾದ ಬಳಿಕ ಯಕ್ಷಗಾನವು ಕ್ರೀಡೆಯೊಂದಿಗೆ ಬೆಸೆದುಕೊಂಡಿತು. ಈ ಸಂದರ್ಭದಲ್ಲಿ ಯಕ್ಷಗಾನ ರಂಗದ ಎಲ್ಲಾ ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಗುರುಗಳು ಸಿಕ್ಕಿರುವುದು ಇವರ ಸರ್ವಾಂಗ ಕಲಿಕೆಗೆ ಸಹಕಾರಿಯಾಯಿತು. ಧರ್ಮಸ್ಥಳ ದೇವಸ್ಥಾನದ ಪಾರುಪತ್ಯಗಾರ್ ನಾರಣಪ್ಪಯ್ಯ ಇವರ ನೇತೃತ್ವದ ಪ್ರತಿಭಾನ್ವಿತ ಕಲಾವಿದರನ್ನೊಳಗೊಂಡ ಸಣ್ಣ ಮೇಳದಲ್ಲಿ ಕಲಾವಿದರಾದರು. ಸಣ್ಣ ಮೇಳ ಮೆರುಗುತ್ತಿದ್ದಂತೆ ಇವರೂ ಕಲಾವಿದನಾಗಿ ಬೆಳೆದರು.
ಬಣ್ಣದ ವೇಷವೆಂದರೆ ಹೆಚ್ಚು ಒಲವು ಹೊಂದಿದ ನರೇಂದ್ರರು ಚೌಕಿಯಲ್ಲಿ ಬಣ್ಣದ ವೇಷ ನಿರ್ವಹಿಸುವ ಹಿರಿಯ ಕಲಾವಿದರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು.
ದಕ್ಷಾಧ್ವರ ಪ್ರಸಂಗದ ವೀರಭದ್ರನ ಪಾತ್ರ ಬಹಳ ಹೆಸರು ತಂದ ಪಾತ್ರ.. ಇವರ ʼವೀರಭದ್ರʼ ಪಾತ್ರದ ಪ್ರವೇಶ, ಬಾರಣೆಯ ಕ್ರಮ ಆಕರ್ಷಣೀಯ. ಹೆಣ್ಣು ಬಣ್ಣದ ಪಾತ್ರಗಳಲ್ಲಿ ಉತ್ತಮ ಪ್ರದರ್ಶನ. ದುಶ್ಯಾಸನ ವಧೆಯ ದುಶ್ಯಾಸನ ಮತ್ತು ರಾಕ್ಷಸ ಸ್ವಭಾವದ ಬಣ್ಣದ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಕಲಾವಿದರಾಗಿ ದೆಹಲಿ ರಾಷ್ಟ್ರಪತಿ ಭವನ, ದೆಹಲಿ ಕನ್ನಡ ಸಂಘ, ಭಾರತ ಭವನ, ಭೋಪಾಲ, ಮುಂಬೈಯಲ್ಲಿ ನಡೆದ “ಅಪ್ನಾ ಉತ್ಸವ”, ಕೇರಳ ಪ್ರಾಂತ್ಯ ಗುರುವಾಯೂರು ಉತ್ಸವ, ಕೇರಳ ಕಲಾಮಂಡಲಂ ಉತ್ಸವ, ಊಟಿ, ಹೈದರಾಬಾದ್, ಚೆನೈ, ಕೊಯಂಬುತ್ತೂರಲ್ಲಿ ಪಾಲ್ಗೊಂಡಿದ್ದಾರೆ. ಹಾಸನ ಹೊಯ್ಸಳೋತ್ಸವ, ಕದಂಬೋತ್ಸವ, ಮೈಸೂರು ದಸರಾ ಉತ್ಸವ, ಕನ್ನಡ ರಾಜ್ಯೋತ್ಸವ ಬೆಳ್ಳಿಹಬ್ಬ, ದ.ಕ ಕರಾವಳಿ ಉತ್ಸವ ಸೇರಿದಂತೆ ಜಿಲ್ಲಾ, ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಹವ್ಯಾಸಿ ತಂಡಗಳ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದರು.
2003ರಲ್ಲಿ ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಇಂಡೋ ಜರ್ಮನ್ ಸಾಂಸ್ಕೃತಿಕ ಕಲಾ ಮೇಳ ಮತ್ತು 2008ರಲ್ಲಿ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದನಾಗಿ ಭಾಗಿಯಾಗಿದ್ದಾರೆ.
ನರೇಂದ್ರ ಕುಮಾರ್ ಅವರು ಶಾಲಾ ಮಕ್ಕಳಿಗೆ ನಾಟ್ಯ ತರಬೇತಿ ನೀಡುವ ಮೂಲಕ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ದಾಟಿಸುವ ಮಹತ್ಕಾರ್ಯ ಮಾಡಿದ್ದಾರೆ. ತಾನು ಸೇವೆಯಲ್ಲಿ ನಿರತರಾಗಿದ್ದ ಧರ್ಮಸ್ಥಳ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ನಾಟ್ಯ ತರಬೇತಿ ನೀಡಿ ವೃಷಸೇನ ಕಾಳಗ ಎಂಬ ಪ್ರಸಂಗದ ಪ್ರದರ್ಶನ ನೀಡುವ ಮೂಲಕ ಆರಂಭವಾಯಿತು ತರಬೇತಿ ಪರ್ವ. ಬೆಂಗಳೂರು ಮತ್ತು ಹೈದರಾಬಾದ್ ದೂರದರ್ಶನ , ಮಹಿಳಾ ಸಾಹಿತ್ಯ ಸಮ್ಮೇಳನ ಹಾಗೂ ರಾಜ್ಯದ ಅನೇಕ ಕಡೆಗಳಲ್ಲಿ ವಿದ್ಯಾರ್ಥಿನಿಯರ(ಶ್ರೀಮತಿ ವಸಂತಿ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಶ್ಯಾಮಲಾ ಮತ್ತು ಇತರರು) ತಂಡದಿಂದ ಯಕ್ಷಗಾನ ನಡೆದಿದೆ. ಇವರು ತರಬೇತಿ ನೀಡಿದ ವಿದ್ಯಾರ್ಥಿಗಳ ತಂಡವು ಅಹಮದಾಬಾದ್ ನಲ್ಲಿ ಅಂದು ದೇಶದ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರ ಸಮ್ಮುಖದಲ್ಲಿ ರಾವಣ ವಧೆ ಪ್ರಸಂಗವನ್ನು ಪ್ರಸ್ತುತಿ ಪಡಿಸಿ ಮೆಚ್ಚುಗೆ ಗಳಿಸಿದೆ . ಗಾಂಧೀನಗರದಲ್ಲಿ ನಡೆದ ರಾಷ್ಟ್ರೀಯ ಸೇವಾದಳ ಕಾಂಗ್ರೆಸ್ಸಿನ ಸಮ್ಮೇಳನದಲ್ಲಿ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಹಲವಾರು ಚೌತಿ ಮತ್ತು ದಸರಾ ಉತ್ಸವಗಳಲ್ಲಿ ವಿದ್ಯಾರ್ಥಿಗಳ ತಂಡವು ಯಕ್ಷಗಾನ ಪ್ರದರ್ಶನ ನೀಡಿದೆ. ಅಲ್ಲದೇ ನಾಲ್ಕು ದಶಕಕ್ಕಿಂತಲೂ ಹೆಚ್ಚಿನ ವರ್ಷಗಳ ಕಾಲ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಾಟ್ಯ ತರಬೇತಿ ನೀಡಿ ಯಕ್ಷಗಾನ ಪ್ರದರ್ಶನ ನಡೆಸಿದವರು. ಇವರಿಂದ ತರಬೇತಿ ಪಡೆದವರು ಮೇಳದ ಕಲಾವಿದರಾಗಿ ಮತ್ತು ಹವ್ಯಾಸಿ ಕಲಾವಿದರಾಗಿದ್ದಾರೆ.
ಬಣ್ಣಗಾರಿಕೆ, ವೇಷ ಭೂಷಣ ದಲ್ಲೂ ಭಾಗಿಯಾಗುವುದು ಇವರ ಸರ್ವಾಂಗೀಣವಾಗಿ ತೊಡಗುವಿಕೆಗೆ ಸಾಕ್ಷಿ.
ಇವರ ಪುತ್ರರಾದ ಡಾ. ಶ್ರುತಕೀರ್ತಿ ರಾಜ್ ಅವರು ಉಪನ್ಯಾಸಕ ವೃತ್ತಿಯೊಂದಿಗೆ ಕಲಾವಿದರಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವುದು ಯಕ್ಷಗಾನವನ್ನು ಆರಾಧಿಸುವ ನರೇಂದ್ರರ ಕಲಾ ಜೀವನಕ್ಕೆ ಸಾರ್ಥಕತೆ ಲಭಿಸಿದೆ.
ಶಿಕ್ಷಕರಾಗಿ ಕ್ರೀಡಾ ಕ್ಷೇತ್ರದ ಸಾಧನೆ
ಸ್ವತಃ ಅತ್ಯುತ್ತಮ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರರಾದ ನರೇಂದ್ರ ಮಾಸ್ಟರ್
ಬೆಂಗಳೂರಿನ ದೈಹಿಕ ಕಾಲೇಜಿನಲ್ಲಿ ಶಾರೀರಿಕ ಶಿಕ್ಷಣ ಮುಗಿಸಿದ ಬಳಿಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 1968 ರಿಂದ ಶಾರೀರಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಪ್ರಥಮ ವರ್ಷದಲ್ಲಿಯೇ ಶಾಲೆಗೆ ತಾಲೂಕು ಮಟ್ಟದ ಕ್ರೀಡಾ ಚಾಂಪಿಯನ್ ಶಿಪ್. 1972-73ರಲ್ಲಿ ವಿ ಎನ್ ಚಂದ್ರ ಎಂಬ ವಿದ್ಯಾರ್ಥಿ 800 ಮತ್ತು 1500 ಮೀಟರ್ ಓಟದಲ್ಲಿ ರಾಜ್ಯ ಪ್ರಶಸ್ತಿ ಗಳಿಸಿದರೆ 1977ರಲ್ಲಿ ಎಂ ಆನಂದ ಶೆಟ್ಟಿ ಎಂಬ ಕ್ರೀಡಾ ಪಟುವನ್ನು ತರಬೇತುಗೊಳಿಸಿ ರಾಷ್ಟ್ರ ಮಟ್ಟದ ಶಾಲಾ ಕ್ರೀಡಾ ಕೂಟದಲ್ಲಿ ನಡೆದ 100 ಮೀಟರ್ ಓಟದಲ್ಲಿ ಬಂಗಾರದ ಪದಕ ಗಳಿಸುವಲ್ಲಿ ಸರ್ವ ರೀತಿಯಲ್ಲೂ ಶ್ರಮಿಸಿದ್ದಾರೆ.
ಮುಂದೆ ಶಾಲೆ ಬಿಟ್ಟ ಬಳಿಕ ಆತ 1980ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 1982 ರಲ್ಲಿ ದೆಹಲಿಯಲ್ಲಿ ನಡೆದ ಏಷಿಯಾಡ್ ನಲ್ಲಿ 100ಮೀಟರ್ ಓಟದಲ್ಲಿ ಅಂತಿಮ ಸುತ್ತಿಗೆ ತೇರ್ಗಡೆಯಾಗಲು ಇವರ ಪ್ರೋತ್ಸಾಹ ಕಾರಣವಾಯಿತು. ವಾಲಿಬಾಲ್ ಆಟದಲ್ಲಿ ಇವರ ವಿದ್ಯಾರ್ಥಿ ಥೋಮಸ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದವರು. 1991ರಿಂದ 2002ರ ವರೆಗೆ ಪ್ರತಿ ವರ್ಷ ಒಬ್ಬ ಕ್ರೀಡಾ ಪಟುವನ್ನು ತರಬೇತುಗೊಳಿಸಿ ರಾಷ್ಟ್ರ ಮಟ್ಟದ ಶಾಲಾ ಕ್ರೀಡಾ ಕೂಟದಲ್ಲಿ ಪ್ರತಿನಿಧಿಸಿದ ಸಾಧನೆ ಇವರದ್ದು.

ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಕಾಣುತ್ತಾ ತನ್ನ ಸಂಬಳದ ಹಣದಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ್ದಾರೆ, ಹತ್ತಾರು ಮಕ್ಕಳಿಗೆ ಪುಸ್ತಕ ಕೊಟ್ಟಿದ್ದಾರೆ. ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಕ್ರೀಡಾ ಪಟುಗಳನ್ನು ತಯಾರು ಮಾಡಿದ ಹೆಗ್ಗಳಿಕೆ ಇವರದ್ದು.
ಶಾಲಾ ಶಿಕ್ಷಕರಾಗಿ ಇರುವ ಸಂದರ್ಭದಲ್ಲಿ ನೇವಲ್ ಎನ್. ಸಿ.ಸಿ ಅಧಿಕಾರಿಯಾಗಿ 18 ವರ್ಷ ನಿರ್ವಹಣೆ. ಹಲವಾರು ಎನ್.ಸಿ.ಸಿ ಕಾಡೆಟ್ ಗಳನ್ನು ರಾಷ್ಟ್ರೀಯ ತರಬೇತಿಗಾಗಿ ಕಳುಹಿಸಿದ್ದಾರೆ. ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತೀರ್ಪುಗಾರನಾಗಿ ನಿರ್ವಹಣೆ. ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಜಿಲ್ಲಾ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ. ರಾಜ್ಯ ಕಬಡ್ಡಿ ಸಂಸ್ಥೆಯ ಸದಸ್ಯರಾಗಿ, ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರಾಗಿ, ಬೆಳ್ತಂಗಡಿ ಕಬಡ್ಡಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವರು. ತಾಲೂಕು ವಾಲಿಬಾಲ್ ಸಂಸ್ಥೆಯ ಕಾರ್ಯಕಾರಿ ಸದಸ್ಯರಾಗಿದ್ದರು. 50 ವರ್ಷ ಮೇಲ್ಪಟ್ಟವರ ಸ್ವಾತಂತ್ರ್ಯೋತ್ವದ ಕಬಡ್ಡಿ ಪಂದ್ಯಾವಳಿಯಲ್ಲಿ ತನ್ನ 67 ನೇ ವಯಸ್ಸಿನಲ್ಲಿ ಭಾಗವಹಿಸಿ ಉತ್ತಮ ಹಿಡಿತಗಾರ ಪ್ರಶಸ್ತಿ ಗಳಿಸಿರುವುದು ಇವರ ನಿರಂತರ ತೊಡಗುವಿಕೆಗೆ ಸಾಕ್ಷಿಯಾಗಿದೆ.
ನರೇಂದ್ರ ಮಾಸ್ಟರ್ ಅವರ ನಿರ್ವಹಣಾ ಸಾಮರ್ಥ್ಯ
ತನ್ನ ಕಾಯಕ ನಿಷ್ಠೆಯಿಂದ , ಕರ್ತವ್ಯ ದ ಬದ್ಧತೆಯಿಂದ, ಪ್ರಾಮಾಣಿಕತೆಯಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ಮೆಚ್ಚುಗೆ ಪಾತ್ರರಾದವರು.
ಅನೇಕ ಹೊಣೆಗಾರಿಕೆ ಹೆಗಲೇರುವಂತಾಯಿತು. ಲಕ್ಕಣ್ಣ ಶೆಟ್ಟರು ಜವಾಬ್ದಾರಿಯಿಂದ ಹಿಂದೆ ಸರಿದ ಬಳಿಕ ಧರ್ಮಸ್ಥಳದ ಸಣ್ಣ ಮೇಳದ ಜವಾಬ್ದಾರಿಯನ್ನು ಇವರೇ ಹೊತ್ತು ಮುನ್ನಡೆಸುವಂತಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಸಲಹಾ ಸಮಿತಿ ಸದಸ್ಯರೂ ಆಗಿದ್ದರು. ಶ್ರೀ ಧರ್ಮಸ್ಥಳ ಮೇಳದ ಸೇವೆಯಾಟದಂದು ಚೌಕಿಯಿಂದ ತೊಡಗಿ ಆಟ ಮುಗಿದು ಕಲಾವಿದರು ತೆರಳುವ ತನಕದ ವ್ಯವಸ್ಥೆಗಳ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಶಾಲಾ ವಿದ್ಯಾರ್ಥಿ ನಿಲಯದ ಜವಾಬ್ದಾರಿ, ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಸಂದರ್ಭ ನಡೆಸುವ ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗುತ್ತಿದ್ದರು.

ನರೇಂದ್ರರ ಸಹಕಾರ
ನರೇಂದ್ರರು ಕರುಣಾಮಯಿ. ಬಡವ ಶ್ರೀಮಂತ ಎಂಬ ಭಾವವಿಲ್ಲದೆ ಎಲ್ಲರೊಂದಿಗೆ ಸಮಾನವಾಗಿ ಬೆರೆಯುವ ಇವರು ವೈಯಕ್ತಿಕ ಬದುಕಿಗೆ ನೀಡಿದ್ದಕ್ಕಿಂತ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ಅನೇಕರಿಗೆ ಸದ್ದಿಲ್ಲದೇ ಸಹಾಯ ನೀಡಿದ್ದಾರೆ. ತನ್ನ ವಿದ್ಯಾರ್ಥಿಗಳನ್ನು ನೋಡಿದರೆ ಸಾಕು, ತಾನೇ ಬೆನ್ನು ತಟ್ಟಿ ನಮಸ್ಕಾರ ನೀಡುವ ಅಪರೂಪದ ವ್ಯಕ್ತಿತ್ವ.
ಯಕ್ಷಗಾನ ಆಡಿಸುವ ಕಲಾವಿದರು ಇವರ ಬಳಿ ಬಂದರೆ ತಾನು ಆಟಕ್ಕೆ ಹೋಗಲಿ, ಹೋಗದಿರಲಿ, ಬರಿಗ್ಯೆಯಲ್ಲಿ ಮಾತ್ರ ಕಳುಹಿಸಲಿಲ್ಲ. ಅವರ ಧಾರಾಳತನವನ್ನು ದುರುಪಯೋಗಿಸಿದವರೂ ಇದ್ದಾರೆ. 2015ರಿಂದ ಬಹುತೇಕ ಎಲ್ಲಾ ರಂಗದಿಂದ ನಿವೃತ್ತರಾದರೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಡೆಯುವ ಸೇವಾ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ.
ಗುರುತರ ಗೌರವಗಳು
ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2021ನೇ ಸಾಲಿನ ಯಕ್ಷಸಿರಿ ಪ್ರಶಸ್ತಿ, 1997ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ ತರಬೇತಿ ಕೇಂದ್ರದ ಬೆಳ್ಳಿ ಹಬ್ಬದ ಪುರಸ್ಕಾರ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಶಿಕ್ಷಣ ಇಲಾಖೆ ಮತ್ತು ಅನೇಕ ಸಂಘ ಸಂಸ್ಥೆಗಳು ಉತ್ತಮ ಕ್ರೀಡಾ ತರಬೇತುದಾರ ಪ್ರಶಸ್ತಿಗಳು ಹಾಗೂ ಕಲಾ ಸೇವೆಗಾಗಿ ಹಲವಾರು ಪ್ರಶಸ್ತಿ, ಸೇವಾಗೌರವವನ್ನು ಅರ್ಪಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಮತ್ತು ಕುಟುಂಬದವರ ಮಾರ್ಗದರ್ಶನ, ಪ್ರೋತ್ಸಾಹ ನನ್ನ ಶಿಕ್ಷಕ ವೃತ್ತಿ ಮತ್ತು ಯಕ್ಷಗಾನ ಪ್ರವೃತ್ತಿ ಸುಗಮವಾಗಿ ಸಾಗಲು ಕಾರಣ ಎನ್ನುವ ನರೇಂದ್ರರರ ವಿನೀತತೆ ಒಂದು ಮಾದರಿಯಾಗಿದೆ.
ಯಕ್ಷಭಾರತಿಯೊಂದಿಗೆ ನರೇಂದ್ರ ಕುಮಾರ್
ಯಕ್ಷಭಾರತಿಯ ಪದಾಧಿಕಾರಿಗಳು, ಸದಸ್ಯರಲ್ಲಿ ಅನೇಕರು ಒಂದಲ್ಲ ಒಂದು ರೀತಿಯಲ್ಲಿ ಅವರ ಶಿಷ್ಯರೇ ಆಗಿದ್ದಾರೆ. ಒಂದಿಬ್ಬರಿಗೆ ನಾಟ್ಯ ತರಬೇತಿ ನೀಡಿದ ಗುರುಗಳಾದರೆ ಬಹುತೇಕರಿಗೆ ಪ್ರೌಢಶಾಲೆಯಲ್ಲಿ ಗುರುಗಳು. ಯಕ್ಷಭಾರತಿಯ ಬಹುತೇಕ ಕಾರ್ಯಕ್ರಮಕ್ಕೆ ತನ್ನ ಸಹಕಾರ ನೀಡಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಯಕ್ಷಭಾರತಿ ಗೌರವಪೂರ್ವಕವಾಗಿ ಸಂಮಾನಿಸಿದೆ.
ನಾನು ಕನ್ಯಾಡಿ ಶಾಲೆಯಲ್ಲಿ ಐದು ಮತ್ತು ಆರನೇ ತರಗತಿಯಲ್ಲಿದ್ದಾಗ ಅವರು ನನಗೆ ನಾಟ್ಯ ತರಬೇತಿ ನೀಡಿದ ಗುರುಗಳಾದರೆ ಪ್ರೌಢಶಾಲೆಯಲ್ಲಿ ಶಾರೀರಿಕ ಶಿಕ್ಷಕರು. ವೃತ್ತಿಯಿಂದ ನಿವೃತ್ತರಾದ ಬಳಿಕ ಅವರು ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡಿ ಪ್ರದರ್ಶಿಸ್ಪಟ್ಟ ಯಕ್ಷಗಾನದಲ್ಲಿ ನಾನು ಭಾಗವತನಾಗಿರುತ್ತಿದ್ದೆ. ಕನ್ಯಾಡಿಯ ಗಣೇಶ್ ಕೃಪಾ ಹೋಟೆಲ್ ಅವರ ಪ್ರೀತಿಯ ಉಪಾಹಾರ ಗ್ರಹ. ಉರಲ್ಲಿದ್ದಾಗಲೆಲ್ಲಾ ಅಲ್ಲಿಯ ಕಾಫಿ, ನೀರು ದೋಸೆ ಸವಿಯದೇ ಇರಲು ಅಸಾಧ್ಯ ಎನ್ನುವ ಅವರಿಗೆ ಅನೇಕ ಬಾರಿ ನಾನೇ ಜೊತೆಗಾರ. ಪೋನ್ ಮಾಡಿ ಬರಲು ಹೇಳುವ ಅವರು ಕರೆ ಸ್ವೀಕರಿಸದೇ ಹೋದರೆ ಅನೇಕ ಬಾರಿ ಮನೆಗೇ ಬಂದದ್ದಿದೆ. ನೀನು ವೇಷ ಮಾಡುವುದು ಬಿಟ್ಟು, ಯಕ್ಷಗಾನ ವೇದಿಕೆಯಲ್ಲಿ ನನ್ನ ಶಿಷ್ಯನೊಬ್ಬನ ಬಣ್ಣದ ವೇಷ ನೋಡದ ಹಾಗಾಯಿತು ಎಂದು ಪ್ರೀತಿಯಿಂದಲೇ ಆಗಾಗ ನನ್ನಲ್ಲಿ ಹೇಳಿ ಬೆನ್ನು ತಟ್ಟುತ್ತಿದ್ದ ಗುರುಗಳಾದ ನರೇಂದ್ರ ಮಾಸ್ಟರ್ ಕಾಲನೊಂದಿಗೆ ವೀಲೀನವಾಗಿದ್ದಾರೆ… ಪತ್ನಿ , ಮೂವರು ಮಕ್ಕಳು ಹಾಗೂ ಬಂಧುವರ್ಗ ಮತ್ತು ಅವರು ಪ್ರೀತಿಸುವ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಅಗಲಿದ್ದಾರೆ. . ಹೌದು ನಾವು ಕಾಲನೊಂದಿಗೆ ಸಾಗಲೇಬೇಕು. ಆದರೆ ಅವರು ಮೆತ್ತಿಕೊಂಡಿದ್ದ ಸರಳತೆ, ಕರುಣೆ, ಪ್ರೀತಿ, ಮಮತೆಯನ್ನು ನೆನೆದರೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಅಗಲಿದ ಅವರ ಆತ್ಮಕ್ಕೆ ಸಾಯುಜ್ಯ ಪ್ರಾಪ್ತಿಯಾಗಲಿ….
✍ ಮಹೇಶ ಕನ್ಯಾಡಿ
ಸಂಚಾಲಕರು
ಯಕ್ಷಭಾರತಿ (ರಿ) ಕನ್ಯಾಡಿ ಬೆಳ್ತಂಗಡಿ ತಾಲೂಕು.
