ಉಜಿರೆ (ಆ.22) : “ ಸಂಸ್ಕೃತ ಭಾಷೆ ನಶಿಸಿ, ಅಳಿಸಿ ಹೋಗಲು ಬಿಡದೇ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ. ಮೂಲ ಭಾಷೆಯನ್ನ ನಾವು ಮಾತನಾಡಿ, ಅಭಿವೃದ್ಧಿಗೊಳಿಸಬೇಕು ” ಎಂದು ಇಲ್ಲಿನ ಶ್ರೀ .ಧ. ಮಂ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಹೇಳಿದರು.

ಇದನ್ನೂ ಓದಿ: 🟠ಉಜಿರೆ : ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಇಲ್ಲಿನ ಶ್ರೀ. ಧ. ಮಂ ಕಾಲೇಜು (ಸ್ವಾಯತ್ತ) ಮತ್ತು ಶ್ರೀ. ಧ. ಮಂ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ವಿಭಾಗದ ಜಂಟಿ ಆಶ್ರಯದಲ್ಲಿ “ ಸಂಸ್ಕೃತ ಸಂಧ್ಯಾ- ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ ತರಗತಿಗಳನ್ನ ನಡೆಸುವಾಗ ಆದಷ್ಟು ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆಯನ್ನು ನಡೆಸ ಬೇಕು. ದಿನ ನಿತ್ಯವೂ ಕೂಡ ಕನಿಷ್ಠ ಒಂದು ವಾಕ್ಯವನ್ನು ಸಂಸ್ಕೃತದಲ್ಲಿ ಮಾತನಾಡುವುದಕ್ಕೆ ಎಲ್ಲರೂ ಅಭ್ಯಾಸ ಮಾಡಬೇಕು ” ಎಂದು ಸಂಸ್ಕೃತ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

“ ವಿಭಾಗದ ವತಿಯಿಂದ ಮುಂದಿನ ದಿನಗಳಲ್ಲಿ ಸಂಸ್ಕೃತ ಭಾಷೆ, ಸಂಸ್ಕೃತಿಯನ್ನ ಉಳಿಸಿ ಬೆಳೆಸುವಂತಹ ಹಲವಾರು ಕಾರ್ಯಕ್ರಮಗಳು ಬರಲಿ ” ಎಂದು ಅವರು ಶುಭಹಾರೈಸಿದರು.
ಪದವಿ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಮತ್ತು ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಎನ್ ಭಟ್ ಅಧ್ಯಕ್ಷೀಯ ಸ್ಥಾನವಹಿಸಿ ಮಾತನಾಡಿದರು. “ ಸಂಸ್ಕೃತ ದೇವ ಭಾಷೆ. ಯಾಕೆಂದರೆ ಹಿಂದೆ ದೇವತೆಗಳು ಪರಸ್ಪರ ಸಂಸ್ಕೃತ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಮಾತ್ರವಲ್ಲದೇ ಹಿಂದಿನ ಕಾಲದಲ್ಲಿ ಜನರು ಪರಸ್ಪರ ಸಂಸ್ಕೃತ ಭಾಷೆಯಲ್ಲೇ ಸಂಸ್ಕೃತ ಭಾಷೆಯಲ್ಲೇ ವ್ಯವಹರಿಸುತ್ತಿದ್ದರು. ಬ್ರಿಟೀಷರು ನಮ್ಮ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ನಂತರವೇ ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಯ ಉಪಯೋಗ ಕಡಿಮೆಯಾಗಿದ್ದು. ” ಎಂದು ಅವರು ಹೇಳಿದರು.

“ ಪ್ರಾಚೀನ ಕಾಲದಲ್ಲಿ ನಮ್ಮೆಲ್ಲರ ಮಾತೃ ಭಾಷೆ ಸಂಸ್ಕೃತವೇ ಆಗಿತ್ತು. ಆದ್ದರಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಮ್ಮನಿಂದ ಆದಷ್ಟು ಸಂಸ್ಕೃತ ಭಾಷೆಯನ್ನ ನಮ್ಮ ಸಂಭಾಷಣೆಯಲ್ಲಿ ಪ್ರಯೋಗ ಮಾಡುವ ಪ್ರಯತ್ನವನ್ನು ಮಾಡಿದರೆ ಮಾತ್ರ ಭಾಷೆಯ ಮೇಲೆ ನಮಗೆ ಪ್ರೀತಿ, ಅಭಿಮಾನ ಹುಟ್ಟುತ್ತದೆ. ” ಎಂದು ಅವರು ಹೇಳಿದರು.

ವಿಭಾಗದ ವತಿಯಿಂದ ಪ್ರತಿ ತಿಂಗಳು ಹೊರತರುವ “ ಸುಬೋಧಿನಿ ” ಬಿತ್ತಿ ಪತ್ರದ ವಿಶೇಷಾಂಕವನ್ನು ಉದ್ಘಾಟಕರು ಬಿಡುಗಡೆಗೊಳಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸಂಸ್ಕೃತ ಭಾಷಾ ಪತ್ರಿಕೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗ ಪ್ರಾಧ್ಯಾಪಕ ಡಾ. ಪ್ರಸನ್ನ ಕುಮಾರ್ ಐತಾಳ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಲಕಾ, ಆತ್ಮಿಕ ನಿರೂಪಿಸಿ, ಹಿರಿಯ ವಿದ್ಯಾರ್ಥಿನಿ ಹಾಗೂ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ವಂದಿಸಿದರು.
ಸಂಸ್ಕೃತ ಭಾಷೆಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮ ಸಂಯೋಜಕ, ಸಹ ಪ್ರಾಧ್ಯಾಪಕ ಶ್ರೇಯಸ್. ಜೆ. ಪಾಳಂದೆ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
