ಬೆಂಗಳೂರು: ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕರಣದ ಕುರಿತ SIT ತನಿಖೆಯು ಇದೀಗ ಹೊಸ ವಿವಾದದ ಸುಳಿಯಲ್ಲಿ ಸಿಲುಕಿದೆ. ತನಿಖೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಬಿಜೆಪಿ ಹಿರಿಯ ಮುಖಂಡ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್, ಸರಣಿ ಆರೋಪಗಳೊಂದಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ನೇರ ಸವಾಲು ಹಾಕಿದ್ದಾರೆ.


ನಿನ್ನೆಯ ದೃಶ್ಯ ಮಾಧ್ಯಮಗಳ ವರದಿಗಳು ಮತ್ತು ಹಿಂದಿನ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. “ಯಾಕೋ ಇದು ಸರಿಯಾಗಿ ನಡೆಯುತ್ತಿಲ್ಲ ಅಂತ ನಿಮಗೆ ಅನ್ನಿಸುತ್ತಿಲ್ಲವೇ. ಮಾನ್ಯ ಗೃಹ ಮಂತ್ರಿ ಪರಮೇಶ್ವರ ರವರೇ?” ಎಂದು ನೇರವಾಗಿ ಗೃಹ ಸಚಿವರನ್ನೇ ಪ್ರಶ್ನಿಸಿರುವ ಸುರೇಶ್ ಕುಮಾರ್, SIT ತನಿಖೆಯ ಹಾದಿ ತಪ್ಪಿದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

SITಗೆ ‘ಬುರುಡೆ ತಂದಾತ’ನೇ ವಕ್ತಾರ?
ಸುರೇಶ್ ಕುಮಾರ್ ಅವರ ಪೋಸ್ಟ್ ಪ್ರಮುಖ ಅಂಶವೆಂದರೆ, SIT ತನಿಖೆ ಎದುರಿಸುತ್ತಿರುವ ವ್ಯಕ್ತಿಯೊಬ್ಬನನ್ನು (ಮಾಧ್ಯಮಗಳ ಮಾಹಿತಿ ಪ್ರಕಾರ ‘ಬುರುಡೆ ತಂದಾತ’ ಎಂದೇ ಗುರುತಿಸಲ್ಪಟ್ಟಿರುವ) SIT ತನ್ನ ಅಧಿಕೃತ ವಕ್ತಾರನನ್ನಾಗಿ ನೇಮಿಸಿದೆಯೇ ಎಂಬ ಗಂಭೀರ ಪ್ರಶ್ನೆ. “ಮಧ್ಯಂತರ ವರದಿಯನ್ನು ಆತನೇ ನೀಡುತ್ತಿರುವಂತಿದೆ. ಮಹಜರಿನ ಹೆಸರಲ್ಲಿ ಆತ ಮಾಧ್ಯಮಕ್ಕೆ ನೀಡಿದ ಮಾಹಿತಿಗಳು ಇಡೀ SIT ತನಿಖಾ ವ್ಯವಸ್ಥೆಯನ್ನೇ ಅಣಕಿಸುವಂತಿದೆ” ಎಂದು ಸುರೇಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SIT ತನಿಖೆಯು ನ್ಯಾಯವನ್ನು ಒದಗಿಸುವುದರ ಬದಲು ಮರೀಚಿಕೆಯಾಗಿದೆಯೇ ಎಂಬ ಅನುಮಾನವನ್ನು ವ್ಯಕ್ತಪಡಿಸಿರುವ ಸುರೇಶ್ ಕುಮಾರ್, “SIT ಯಿಂದ ನ್ಯಾಯ ನಿರೀಕ್ಷಣೆ ಮರೀಚಿಕೆ ಅನ್ನಿಸಿದ್ದು ನನಗೆ ಮಾತ್ರವೇ?” ಎಂದು ಪ್ರಶ್ನಿಸಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆತಂಕವನ್ನು ಈ ಮೂಲಕ ಅವರು ಹೊರಹಾಕಿದ್ದಾರೆ.

ಷಡ್ಯಂತ್ರದ ಮುಖ್ಯಸ್ಥನ ಹಠಾತ್ ಪ್ರತ್ಯಕ್ಷ, ಕುತಂತ್ರದ ಯಾವ ಮುಖ ?ಯಾರ ನಿರ್ದೇಶನ?
ಇದೇ ವೇಳೆ, ಈ ಪ್ರಕರಣದ “ಷಡ್ಯಂತ್ರದ ಮುಖ್ಯಸ್ಥನೆಂದೇ ಗುರುತಿಸಲ್ಪಟ್ಟ ವ್ಯಕ್ತಿ” ಅನೇಕ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದರ ಬಗ್ಗೆಯೂ ಸುರೇಶ್ ಕುಮಾರ್ ಗಮನ ಸೆಳೆದಿದ್ದಾರೆ. ನಿನ್ನೆ ಏಕಾಏಕಿಯಾಗಿ SIT ಮುಂದೆ ಹಾಜರಾಗಿ ದೂರು ಸಲ್ಲಿಸಿರುವುದನ್ನು “ಕುತಂತ್ರದ ಯಾವ ಮುಖ?” ಎಂದು ವಿಶ್ಲೇಷಿಸಿರುವ ಅವರು, “ಇದು ಯಾರ ನಿರ್ದೇಶನ?” ಎಂದು ನೇರವಾಗಿ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ಗುರಿಯಾಗಿಸಿದ್ದಾರೆ.
ಸುರೇಶ್ ಕುಮಾರ್ ಅವರ ಈ ಪೋಸ್ಟ್ SIT ತನಿಖೆಯ ಮೇಲೆ ತೀವ್ರ ಅನುಮಾನಗಳನ್ನು ಹುಟ್ಟು ಹಾಕಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಧರ್ಮಸ್ಥಳ ಪ್ರಕರಣದ ತನಿಖೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಅನುಮಾನಗಳಿಗೆ ಸರ್ಕಾರ ಹೇಗೆ ತೆರೆ ಎಳೆಯುತ್ತದೆ ಎಂಬುದು ಪ್ರಶ್ನೆಯಾಗಿದೆ.
