Belthangady : (ಸೆ.15) ಧರ್ಮಸ್ಥಳದ ‘ಬುರುಡೆ’ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಎಸ್ಐಟಿ ತಂಡವು ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ಆರಂಭಿಸಿದೆ. ಪ್ರಕರಣದಲ್ಲಿ ವಿಠಲ ಗೌಡರ ಆರೋಪಗಳ ಆಧಾರದ ಮೇಲೆ, ಹಾಗೂ ಬಂಗ್ಲೆಗುಡ್ಡದಲ್ಲಿ ವಾಮಾಚಾರ ನಡೆದಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದೆ. ಈಗಾಗಲೇ, ತನಿಖಾ ತಂಡವು ಮಂತ್ರವಾದಿಗಳ ವಿಚಾರಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದೆ.

ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಕಚೇರಿಗೆ ಭೇಟಿ ನೀಡಿ ಪ್ರಕರಣದ ಕುರಿತು ಮಾಹಿತಿ ಪಡೆದಿದ್ದಾರೆ. ಪ್ರಕರಣದಲ್ಲಿ ಸೌಜನ್ಯ ಅವರ ಮಾವ ವಿಠಲ, ಬಂಗ್ಲೆಗುಡ್ಡದಿಂದ ಬುರುಡೆ ತಂದಿದ್ದಾಗಿ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡದಲ್ಲಿ ವ್ಯಾಪಕ ಶೋಧ ನಡೆಸುವ ಸಾಧ್ಯತೆ ಇದೆ. ಮಂಗಳವಾರವೇ (ಸೆಪ್ಟೆಂಬರ್ 16) ಬಂಗ್ಲೆಗುಡ್ಡದ ಪ್ರತಿಯೊಂದು ಇಂಚನ್ನೂ ತನಿಖಾ ತಂಡ ಜಾಲಾಡಲಿದೆ ಎನ್ನಲಾಗಿದೆ. ಈ ನಡುವೆ, ಎಸ್ಐಟಿ ಅಧಿಕಾರಿಗಳು ಕೆಲವು ಮಂತ್ರವಾದಿಗಳನ್ನೂ ವಿಚಾರಣೆಗಾಗಿ ಹುಡುಕುತ್ತಿದ್ದಾರೆ.

ಬಂಗ್ಲೆಗುಡ್ಡದಲ್ಲಿ ವಾಮಾಚಾರದ ಆರೋಪ:
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಗ್ಲೆಗುಡ್ಡದಲ್ಲಿ ಮೃತದೇಹಗಳ ರಾಶಿಯೇ ಇದೆ ಎಂದು ವಿಡಿಯೋ ಮಾಡಿ ಆರೋಪಿಸಿದ್ದ ವಿಠಲ ಗೌಡ ಅವರ ಹೇಳಿಕೆಯನ್ನು ಆಧರಿಸಿ ಎಸ್ಐಟಿ ತನಿಖೆಯನ್ನು ತೀವ್ರಗೊಳಿಸಿದೆ. ಬಂಗ್ಲೆಗುಡ್ಡದಲ್ಲಿ ವಾಮಾಚಾರ ನಡೆದಿದೆ ಎಂದು ವಿಠಲ ಗೌಡ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಸುತ್ತಮುತ್ತ ವಾಮಾಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ ಈ ಕುರಿತು ಜವಾಬ್ದಾರಿ ವಹಿಸಲಾಗಿದ್ದು, ತಲೆಬುರುಡೆ ಬಳಸಿ ವಾಮಾಚಾರ ಮಾಡುವವರನ್ನು ಪತ್ತೆ ಹಚ್ಚಿ ಎಸ್ಐಟಿ ಠಾಣೆಗೆ ಕರೆಸುವಂತೆ ಸೂಚನೆ ನೀಡಿದ್ದಾರೆ.

ಮಂಗಳವಾರದಂದು ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ನಡೆಯುವ ಸಾಧ್ಯತೆ ಇದೆ. ಈ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಗುಡ್ಡದಲ್ಲಿನ ಮರಗಳ ಸಂಖ್ಯೆ ಮತ್ತು ಅವುಗಳ ಅಂದಾಜು ವಯಸ್ಸಿನ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. ವಿಠಲ ಗೌಡರು ಸೂಚಿಸುವ ಸ್ಥಳಗಳಲ್ಲಿ ಉತ್ಖನನ ನಡೆಸುವ ಸಾಧ್ಯತೆ ಇದ್ದು, ಧರ್ಮಸ್ಥಳದ ಆಸುಪಾಸಿನಲ್ಲಿ ಮತ್ತೆ ಉತ್ಖನನ ಕಾರ್ಯ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಶವ ದಫನದ ದಾಖಲೆಗಳನ್ನೂ ಎಸ್ಐಟಿ ಪರಿಶೀಲಿಸಿದೆ. ಶವ ದಫನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಸಹ ಎಸ್ಐಟಿ ತನಿಖೆ ನಡೆಸುತ್ತಿದೆ. ಇದೀಗ, ಮಾಟ-ಮಂತ್ರದ ದೃಷ್ಟಿಕೋನದಲ್ಲೂ ತನಿಖೆ ಮುಂದುವರಿಸಲು ನಿರ್ಧರಿಸಿದೆ. ಈ ಎಲ್ಲದರ ನಡುವೆ, ಬಂಗ್ಲೆಗುಡ್ಡ ಪ್ರದೇಶದಲ್ಲಿ ಮತ್ತೊಮ್ಮೆ ಉತ್ಖನನ ನಡೆಸಲಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ಪ್ರಸ್ತುತ, ಎಸ್ಐಟಿ ಅಧಿಕಾರಿಗಳಿಗೆ ತನಿಖೆ ಮುಂದುವರಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಿರುವ ಮುಖ್ಯಸ್ಥ ಪ್ರಣಬ್ ಮೊಹಂತಿ ಬೆಂಗಳೂರಿಗೆ ವಾಪಸಾಗಿದ್ದಾರೆ.
ಇದನ್ನು ಓದಿ : ನಟ ಉಪೇಂದ್ರ, ಪತ್ನಿಯ ಫೋನ್ ಹ್ಯಾಕ್: ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಭಿಮಾನಿಗಳಿಗೆ ಉಪೇಂದ್ರ ಮನವಿ

