Tue. Sep 16th, 2025

Karnataka High Court : ಕರ್ನಾಟಕ ಹೈಕೋರ್ಟ್ – ಧರ್ಮಸ್ಥಳ ಶವಗಳ ಪ್ರಕರಣದ ಕುರಿತು ಎಸ್‌ಐಟಿಗೆ ನೋಟಿಸ್

(ಸೆ.15) ಧರ್ಮಸ್ಥಳದ ಇಬ್ಬರು ನಿವಾಸಿಗಳಾದ ಪುರಂದರ ಗೌಡ ಮತ್ತು ತುಕಾರಾಮ ಗೌಡ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಈ ವಿಷಯವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ದಳಕ್ಕೆ (SIT) ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರು ಗುರುತಿಸಿದ ಸ್ಥಳಗಳಲ್ಲಿ ಅಗೆದು ಶವಗಳನ್ನು ಹೊರತೆಗೆಯಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಎಸ್‌ಐಟಿ ಪರಿಗಣಿಸದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದಾರೆ” ಎಂದು ಹೇಳಿದರು. ಈ ಪ್ರಕರಣದಲ್ಲಿ ಎಸ್‌ಐಟಿ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಎನ್. ಜಗದೀಶ್ ಅವರು ನೋಟಿಸ್ ಸ್ವೀಕರಿಸಿದ್ದು, ಈ ಕುರಿತು ಗುರುವಾರದಂದು ಮಾಹಿತಿ ನೀಡಲಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ದೀಪಕ್ ಖೋಸ್ಲಾ, ಆಗಸ್ಟ್ 6 ಮತ್ತು 29 ರಂದು ಮನವಿ ಸಲ್ಲಿಸಲಾಗಿದ್ದು, “ಗುರುತಿಸಿರುವ ಜಾಗದಲ್ಲಿ ಮೃತದೇಹಗಳ ಅವಶೇಷಗಳು ಪ್ರಾಣಿ ಹಾಗು ಮನುಷ್ಯರಿಗೆ ಕಾಣುವಂತಿದ್ದು ಕೂಡಲೇ ಸ್ಥಳ ಪರಿಶೀಲನೆ ನಡೆಸಬೇಕು” ಎಂದು ವಾದಿಸಿದರು. ತಾವು ನೀಡಿದ ಮಾಹಿತಿ ತಪ್ಪಾಗಿದ್ದರೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಅರ್ಜಿದಾರರು ಹೇಳಿದ್ದಾರೆ ಎಂದು ವಕೀಲರು ತಿಳಿಸಿದರು.

ಅರ್ಜಿದಾರರು ತಮ್ಮ ಉಪಸ್ಥಿತಿಯಲ್ಲಿಯೇ ಸ್ಥಳ ಪರಿಶೀಲನೆ ಮತ್ತು ಶವಗಳನ್ನು ಹೊರತೆಗೆಯಲು ಕೂಡಲೇ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಿದ್ದಾರೆ. ಅಥವಾ, ಹೈಕೋರ್ಟ್‌ನ ರಿಜಿಸ್ಟ್ರಾರ್ (ನ್ಯಾಯಾಂಗ) ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನ್ಯಾಯಾಲಯದ ಆಯುಕ್ತರನ್ನಾಗಿ (Court Commissioner) ನೇಮಿಸಿ, ಅವರೊಂದಿಗೆ ಅರ್ಜಿದಾರರು ಗುರುತಿಸುವ ಸ್ಥಳಗಳಿಗೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕೋರಲಾಗಿದೆ. ಅಲ್ಲದೆ, ಎಲ್ಲಾ ಗುಪ್ತ ಶವಗಳ ಹೂತುಹಾಕುವಿಕೆಯ ಬಗ್ಗೆ ಮಾಡಿರುವ ತನಿಖೆಯ ಪ್ರಗತಿ ವರದಿಗಳನ್ನು ಕಾಲಕಾಲಕ್ಕೆ ಸಲ್ಲಿಸುವಂತೆ ಎಸ್‌ಐಟಿ ಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನು ಓದಿ : ಧರ್ಮಸ್ಥಳ: ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಗೌರವಾರ್ಪಣೆ

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು