Sat. Sep 20th, 2025

ಧರ್ಮಸ್ಥಳ: 27ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಉಪನ್ಯಾಸ ಕಾರ್ಯಕ್ರಮ

ಧರ್ಮಸ್ಥಳ, (ಸೆ.20): ಸನಾತನ ಧರ್ಮದ ಉಳಿವು ಹಾಗೂ ರಕ್ಷಣೆಗಾಗಿ ಋಷಿಮುನಿಗಳ ಸ್ಥಾನ ತುಂಬುತ್ತಿರುವುದು ಭಜನೆ ಎಂದು ಬೆಳ್ತಂಗಡಿಯ ವಕೀಲ ಬಿ.ಕೆ ಧನಂಜಯ್ ರಾವ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಯದುಪತಿ ಗೌಡರಿಗೆ ಗೌರವಾರ್ಪಣೆ


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸಪ್ಟೆಂಬರ್ 14 ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 6ನೇ ದಿನದ ಕಾರ್ಯಾಗಾರದಲ್ಲಿ ಭಜನಾ ಸಂಸ್ಕೃತಿ ಬೆಳೆಸುವಲ್ಲಿ ಭಜನಾ ಮಂಡಳಿಗೆ ಪಾತ್ರ ” ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.


ಇಂದು ಸಾಂಸ್ಕೃತಿಕ ಸೊಗಡನ್ನು ಮರೆತು ನಾವೆಲ್ಲ ದುರಭ್ಯಾಸಗಳ ದಾಸರಾಗಿದ್ದೇವೆ. ಹಿಂದೆ ಸೃಜನಾತ್ಮಕ ಚಿಂತನೆಗಳಿಗೆ ಹೆಚ್ಚಿನ ಅವಕಾಶವಿತ್ತು ಆದರೆ ಇಂದು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕಾದ ಪೋಷಕರೇ ಮಾಧ್ಯಮಗಳ ದಾಸರಾಗಿದ್ದಾರೆ. ಇಂತಹ ಬದಲಾಗಿರುವ ಶೈಲಿಯನ್ನು ಮತ್ತೆ ಸರಿ ದಾರಿಗೆ ತರಲು ಭಜನಾ ಕಮ್ಮಟಗಳೇ ಸೂತ್ರ ಎಂದರು.


ಹಿಂದೂ ಧರ್ಮವೆಂದರೆ ಇತರರಿಗೆ ಸಮಸ್ಯೆ ಉಂಟುಮಾಡದೆ ಬದುಕುವುದು. ಈ ವಿಚಾರದ ಸಾರ್ಥಕತೆ ಸಾಧ್ಯವಾಗುವುದು ಜೀವನ ಶಿಕ್ಷಣ ಕಲಿಸುವ ಭಜನೆಗಳನ್ನು ಮುಂದಿನ ಪೀಳಿಗೆಗೆ ಕರೆದೊಯ್ದಾಗ ಮಾತ್ರ ಸಾಧ್ಯ. ಈ ಭಜನಾ ಕಮ್ಮಟದಲ್ಲಿ ಸೇರಿರುವ ಭಜಕರು ಆಧ್ಯಾತ್ಮಿಕ ವಿಚಾರಧಾರೆಗಳನ್ನು ಮುನ್ನಡೆಸುವ ಪಿತೃ ಸ್ವರೂಪಿ ಹರಿಕಾರರಾಗಿದ್ದೀರಿ ಎಂದು ಹೇಳಿದರು.

ಭಜನಾ ಮಂಡಳಿಗಳು ಯಾವುದೇ ಜಾತಿ ಭೇದವಿಲ್ಲದೇ ನಾವೆಲ್ಲರೂ ಒಂದೇ ಎನ್ನುವ ಧೈಯೋದ್ದೇಶದೊಂದಿಗೆ ಭಾರತವನ್ನು ಸೃಜನಾತ್ಮಕ ರಾಷ್ಟ್ರವಾಗಿ ಪರಿವರ್ತಿಸಲು ಸಹಕಾರಿ ಎಂಬ ಅರ್ಥಪೂರ್ಣ ಉದ್ದೇಶ ಖಾವಂದರದ್ದು ಎಂದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ್ ಸಾಲ್ಯಾನ್ ಗೌರವ ಉಪಸ್ಥಿತಿ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಶ್ರೀಧಾಮ, ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಬನ್ನೂರು, ಪದ್ಮರಾಜ್ ಜೈನ್, ಕೋಶಾಧಿಕಾರಿ, ಭಜನಾ ಕಮ್ಮಟ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ., ಅಳಿಯೂರು ಹಾಗೂ ರವೀಂದ್ರ ಇವರು ಕರ್ತವ್ಯ ನಿರ್ವಹಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀಮತಿ ಶ್ರೀಜಾ ಯೋಗೀಶ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *