ನಿಡ್ಲೆ: ಸೇವಾಭಾರತಿ(ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.),ನಿಡ್ಲೆ, ಗ್ರಾಮ ಪಂಚಾಯತ್, ನಿಡ್ಲೆ ಮತ್ತು ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ, ನಿಡ್ಲೆ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 34ನೇ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಸೆಪ್ಟೆಂಬರ್ 20 ರಂದು ನಿಡ್ಲೆಯಲ್ಲಿ ನಡೆಯಿತು.

ಇದನ್ನೂ ಓದಿ: 🔴ಮಾಲಾಡಿ: ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ
ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.), ಅಧ್ಯಕ್ಷರಾದ ಶ್ರೀ ಧನಂಜಯ ಗೌಡ ರವರು ಮಾತನಾಡಿ ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು. ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ – ಉದ್ಯೋಗದ ಅವಕಾಶವಿರುತ್ತದೆ. ಕಲಿತಂತ ವಿದ್ಯೆಯನ್ನು ಅರ್ಧಕ್ಕೆ ಕೈ ಬಿಡದೆ ಮುಂದುವರಿಸಿಕೊಂಡು ಹೋಗಿ ಎಂದು ಶುಭಹಾರೈಸಿದರು.
ಕನ್ಯಾಡಿ ಸೇವಾಭಾರತಿ(ರಿ.),ಸಲಹಾ ಮಂಡಳಿ ಸದಸ್ಯರು ಮತ್ತು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಎ. ಜಯಕುಮಾರ್ ಶೆಟ್ಟಿ ಯವರು ಮಹಿಳೆಯರು ಸ್ವಾವಲಂಬಿ ಜೀವನವನ್ನು ಮಾಡುತ್ತ ಮುನ್ನಡೆಯುವುದು ಅತ್ಯಗತ್ಯ.. ಯಾವುದೇ ಒಂದು ಕೆಲಸ ಮಾಡಬೇಕಾದರೂ ಅದಕ್ಕೆ ಆಸಕ್ತಿ ಬಹಳ ಮುಖ್ಯವಾಗುತ್ತದೆ.. ಯಾವುದು ನಮ್ಮಿಂದ ಸಾಧ್ಯವಿಲ್ಲ ಅಂದುಕೊಳ್ಳಬಾರದು ಎಲ್ಲವೂ ನಮ್ಮಿಂದ ಸಾಧ್ಯ ಎಂದರೆ ಅದಕ್ಕೆ ತಕ್ಕ ಪ್ರತಿಫಲ ದೊರಕಿಯೇ ದೊರಕುತ್ತದೆ ಎಂದು ಪ್ರೇರಣದಾಯಕ ಮಾತುಗಳಾಡಿದರು.

ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರರಾದ ಶ್ರೀಮತಿ ರಜನಿ ಎಲ್ಲರಿಗೂ ಶುಭಹಾರೈಸಿ ಸಂತಸ ವ್ಯಕ್ತಪಡಿಸಿದರು. ನಮ್ಮ ಸಂಸ್ಥೆಯ ಪರವಾಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಶ್ರೀಮತಿ ರಜನಿ ರವರಿಗೆ ಗೌರವಧನವನ್ನು ನೀಡಿ ಸಹಕರಿಸಿದ್ದಾರೆ. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ, ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ, ಬೆಳ್ತಂಗಡಿ ಸಂಜೀವಿನಿ ಮಹಿಳಾ ಒಕ್ಕೂಟ, ಕೃಷಿಯೇತರ ಚಟುವಟಿಕೆಗಳ ಬ್ಲಾಕ್ ಮ್ಯಾನೇಜರ್ ಶ್ರೀ ನಿತೀಶ್, ಬೆಳ್ತಂಗಡಿ ಸಂಜೀವಿನಿ ಮಹಿಳಾ ಒಕ್ಕೂಟದ ವಲಯ ಮೇಲ್ವಿಚಾರಕರು ಶ್ರೀಮತಿ ವೀಣಾಶ್ರೀ, ನಿಡ್ಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಟ್ಟು 30 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀಮತಿ ಸುಮನ ಸ್ವಾಗತಿಸಿ, ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಹೇಮಾವತಿ ಧನ್ಯವಾದವಿತ್ತರು.

