Mon. Sep 22nd, 2025

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭ

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಪರಿಪೂರ್ಣತೆಯತ ಸಾಗಬೇಕಾದರೆ ಶಿಕ್ಷಣವು ಬಹಳ ಮುಖ್ಯವಾಗಿ ಬೇಕು. ಶಿಕ್ಷಣ ಎನ್ನುವುದು ಅವರ ಬದುಕಿಗೆ ಭದ್ರತೆಯ ಅಡಿಗಲ್ಲು ಆಗಬೇಕಾದರೆ ಇಂತಹ ವಿದ್ಯಾ ಪ್ರೋತ್ಸಾಹ ಧನದ ಅವಶ್ಯಕತೆ ಖಂಡಿತ ಇದೆ. ಅಂತಹ ಕಾರ್ಯವನ್ನು ಮಾಡುತ್ತಿರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೋರಿಯಲ್ ಟ್ರಸ್ಟ್ ಹಾಗೂ ಬೆಳ್ತಂಗಡಿ ತಾಲೂಕಿನ ಸಮಸ್ತ ಶ್ರಾವಕ ಹಾಗೂ ಶ್ರಾವಿಕೆಯರ ಈ ಕಾರ್ಯವು ಮಹತ್ತರವಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಮೌಲ್ಯಾಧಾರಿತ ಬದುಕನ್ನು ಕಟ್ಟಿಕೊಳ್ಳಿ. ಅಂತಹ ಮೌಲ್ಯವೇ ನಮ್ಮ ನಿಮ್ಮೆಲ್ಲರ ಬದುಕಿನ ಭೂಷಣವಾಗಲಿ ಎಂದು ಗೇರುಕಟ್ಟೆ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ಕೊಕ್ರಾಡಿರವರು ಮಾತಾಡಿದರು.

ಇದನ್ನೂ ಓದಿ: 🔴ಬೆಳ್ತಂಗಡಿ : ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಎಸ್‌ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ


ಅವರು ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯ ಸಮುಚ್ಛಯದಲ್ಲಿ ಇರುವ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮನವರ 36ನೇ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀ ಅತಿಶಯ ಕ್ಷೇತ್ರ ಹುಂಬುಜ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಶ್ರೀಮದ್ದದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬೆಳ್ತಂಗಡಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ. ಜಯವರ್ಮರಾಜ ಬಳ್ಳಾಲ್ ರವರು ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಪ್ರಿಯ ಬಳ್ಳಾಲ್ ರವರು ಟ್ರಸ್ಟ್ ವತಿಯಿಂದ ನೀಡುತ್ತಿರುವ ವೈದ್ಯಕೀಯ ನೆರವಿನ ಕುರಿತು ವಿವರವಾಗಿ ಮಾಹಿತಿಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ರಾಜವರ್ಮ ರಾಜ ಬಳ್ಳಾಲ್ ಹಾಗೂ ಮಾಲಾಡಿ ಗುತ್ತು ವಜ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಟ್ರಸ್ಟ ಹಾಗೂ ದಾನಿಗಳ ಸಹಕಾರದಿಂದ ಈ ವರ್ಷ 753 ವಿದ್ಯಾರ್ಥಿಗಳಿಗೆ 22,10,550 ರೂಪಾಯಿಯನ್ನು ವಿದ್ಯಾ ಪ್ರೋತ್ಸಾಹ ಧನವಾಗಿ ವಿತರಿಸಲಾಯಿತು. ಇದೇ ರೀತಿ ಈ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ಕಳೆದ 25 ವರ್ಷಗಳಿಂದ ನೀಡುತ್ತಾ ಬಂದಿರುವುದು ನಮ್ಮ ಸಮಾಜಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ಮಾತ್ರವಲ್ಲದೆ 12 ಜನರಿಗೆ ಕ್ಯಾನ್ಸರ್ ಹಾಗೂ ಇನ್ನಿತರ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿರುವ ಸಹಕಾರವನ್ನು ನೆನಪಿಸಲಾಯಿತು.


ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ವಕೀಲರಾದ ಶಶಿಕಿರಣ್ ಜೈನ ಸ್ವಾಗತಿಸಿ, ಶ್ರೀಮತಿ ಧವಳ ಸಹಕರಿಸಿ, ನಿರಂಜನ್ ಜೈನ್ ಧನ್ಯವಾದ ಸಲ್ಲಿಸಿ, ಧರಣೇಂದ್ರ ಕೆ ಜೈನ್ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸುವುದರೊಂದಿಗೆ ಸಮಾಪನಗೊಂಡಿತು.

Leave a Reply

Your email address will not be published. Required fields are marked *