ಮಂಗಳೂರು (ಸೆ.25): ದೇಶವೇ ತಿರುಗಿ ನೋಡುವಂತಹ ಪ್ರಕರಣವಾಗಿರುವ ‘ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ ತಿಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಸ್ಕ್ ಮ್ಯಾನ್ ಚಿನ್ನಯ್ಯ ಸೇರಿದಂತೆ ಕೆಲವು ವ್ಯಕ್ತಿಗಳು ಮತ್ತು ಅರ್ಜಿದಾರರು, ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)’ ಅರ್ಜಿಯನ್ನು ದಾಖಲಿಸಿತ್ತು. ಆದರೆ, ಈ ಅರ್ಜಿ ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್ ಇದು ಕೇವಲ ವೈಯಕ್ತಿಕ ಹಿತಾಸಕ್ತಿ ಅರ್ಜಿಯಾಗಿದ್ದು, ಹಣ ವಸೂಲಿಗೆ ಸಲ್ಲಿಸಿದ ಅರ್ಜಿಯಾಗಿದೆ ಎಂದು ವಜಾಗೊಳಿಸಿತ್ತು. ಸುಪ್ರೀಂ ಕೋರ್ಟಿನ ಮಾಹಿತಿಯನ್ನು ಮುಚ್ಚಿಟ್ಟ ಬುರುಡೆ ಗ್ಯಾಂಗ್ ರಾಜ್ಯ ಸರ್ಕಾರಕ್ಕೆ ಮಹಾ ಮೋಸ ಮಾಡಿದ್ದಾರೆ ಎಂದು ವರದಿ ಮಾಡಿದೆ.

ಸುಪ್ರೀಂ ಕೋರ್ಟ್ ಆದೇಶವನ್ನು ಮುಚ್ಚಿಟ್ಟು, ಅದೇ ಪ್ರಕರಣದ ಮರು ತನಿಖೆಗಾಗಿ ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ-SIT) ರಚನೆಗೆ ಒತ್ತಾಯಿಸಿದ್ದಾರೆ ಎಂಬ ಗಂಭೀರ ಆರೋಪ ಇದೀಗ ಬಯಲಾಗಿದೆ.
ಸುಪ್ರೀಂ ಕೋರ್ಟ್‌ನಿಂದ ಪಿಐಎಲ್ ವಜಾ ಮತ್ತು ಛೀಮಾರಿ:
ದೂರುದಾರ ಚಿನ್ನಯ್ಯ ಎಂಬುವವರ ಮೂಲಕ ಧರ್ಮಸ್ಥಳದ ಕೆಲ ಪ್ರಕರಣಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ಕೋರಿ ಮೇ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಲಾಗಿತ್ತು.
ವಜಾ ದಿನಾಂಕ: ಮೇ 5 ರಂದು, ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಅದನ್ನು ವಜಾ ಮಾಡಿತ್ತು.
ಕೋರ್ಟ್‌ನಲ್ಲಿ ಛೀಮಾರಿ: ವಿಚಾರಣೆ ವೇಳೆ ಪೀಠವು ದೂರುದಾರ ಚಿನ್ನಯ್ಯನವರಿಗೆ ತೀವ್ರ ಛೀಮಾರಿ ಹಾಕಿದೆ. ‘ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯೇ ಇಲ್ಲ’ ಎಂದು ಕೋರ್ಟ್ ಖಂಡಿಸಿದೆ.
ದುಡ್ಡಿನ ಹಿತಾಸಕ್ತಿ ಆರೋಪ: ಇದು ಪೈಸಾ ಇಂಟ್ರೆಸ್ಟ್ ಲಿಟಿಗೇಷನ್ (PIL), ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಷನ್, ಮತ್ತು ಪೊಲಿಟಿಕಲ್ ಇಂಟ್ರೆಸ್ಟ್ ಲಿಟಿಗೇಷನ್ ಹೊರತು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿ ಅರ್ಜಿಯನ್ನು ವಜಾ ಮಾಡಿದೆ. ಅಲ್ಲದೆ, ಇಷ್ಟು ವರ್ಷ ತಡವಾಗಿ ಪಿಐಎಲ್ ಸಲ್ಲಿಸಿದ್ದಕ್ಕೂ ಕೋರ್ಟ್ ತಪರಾಕಿ ಹಾಕಿತ್ತು.
ರಾಜ್ಯ ಸರ್ಕಾರಕ್ಕೇ ಮೋಸ, ಎಸ್‌ಐಟಿ ರಚನೆ
ಸುಪ್ರೀಂ ಕೋರ್ಟ್‌ನಲ್ಲಿ ಆರಂಭದಲ್ಲೇ ಭಾರೀ ಹಿನ್ನಡೆಯಾಗಿದ್ದರೂ, ‘ಬುರುಡೆ ಗ್ಯಾಂಗ್’ ಈ ನಿರ್ಣಾಯಕ ಮಾಹಿತಿಯನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಕೋರ್ಟ್ ಪಿಐಎಲ್ ವಜಾ ಮಾಡಿದ್ದನ್ನು ಮುಚ್ಚಿಟ್ಟು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಿದೆ. ಸುಪ್ರೀಂ ಕೋರ್ಟ್ ಪಿಐಎಲ್ ಅರ್ಜಿ ವಜಾಗೊಳಿಸಿದ ಆದೇಶವನ್ನು ಮುಚ್ಚಿಟ್ಟು, ಅದೇ ವಿಷಯದ ಮರು ತನಿಖೆಗಾಗಿ ‘ಎಸ್‌ಐಟಿ ರಚಿಸಲು’ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಾಸ್ಕ್ ಮ್ಯಾನ್ ಚಿನ್ನಯ್ಯನ ದೂರಿನಲ್ಲಿ ಸತ್ಯವಿರಬಹುದು ಎಂದು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಆಗಿರುವ ಬೆಳವಣಿಗೆಯ ಕುರಿತು ಮಹತ್ವದ ಮಾಹಿತಿ ತಿಳಿಯದ ಸರ್ಕಾರವು ಬುರುಡೆ ಗ್ಯಾಂಗ್‌ನ ಒತ್ತಾಯಕ್ಕೆ ಮಣಿದು ಎಸ್‌ಐಟಿ ರಚಿಸಿತ್ತು. ಅರ್ಜಿದಾರ ಚಿನ್ನಯ್ಯ ಅವರು ಬೆಳ್ತಂಗಡಿ ಕೋರ್ಟ್‌ನಲ್ಲೂ ಸುಪ್ರೀಂ ಆದೇಶದ ಬಗ್ಗೆ ಬಾಯ್ಬಿಡದೆ, ಅಸಲಿ ಮಾಹಿತಿ ಮುಚ್ಚಿಟ್ಟು ದೂರು ದಾಖಲಿಸಿದ್ದಾರೆ. ಈ ಮೂಲಕ ಬೆಳ್ತಂಗಡಿ ಕೋರ್ಟ್‌ಗೂ ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಕೇಸಿನಲ್ಲಿ ಹುರುಳಿಲ್ಲ (ಮೆರಿಟ್ ಇಲ್ಲ) ಎಂದು ಸುಪ್ರೀಂ ಕೋರ್ಟ್ ಹೇಳಿದ ಮೇಲೂ, ಅರ್ಜಿದಾರರು ಅಸಲಿ ಮಾಹಿತಿ ಮುಚ್ಚಿಟ್ಟು ದೂರು ಕೊಟ್ಟಿದ್ದೇಕೆ? ಎಂಬ ಪ್ರಶ್ನೆ ಇದೀಗ ತನಿಖಾ ಸಂಸ್ಥೆಗಳನ್ನು ಮತ್ತು ಸಾರ್ವಜನಿಕರನ್ನು ಕಾಡುತ್ತಿದೆ. ಬುರುಡೆ ಗ್ಯಾಂಗ್‌ನ ಈ ನಡೆಯು ರಾಜ್ಯ ಸರ್ಕಾರಕ್ಕೇ ದಾರಿ ತಪ್ಪಿಸಿದೆ ಪ್ರಖ್ಯಾತ ನ್ಯೂಸ್ ಚಾನಲ್ ವರದಿ ತಿಳಿಸಿದೆ.
