ಬೆಳ್ತಂಗಡಿ: ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾಯಿ ದುರ್ಗಾಮಾತೆಗೆ ಅತ್ಯಂತ ಪ್ರೀತಿಯ ಸೇವೆಯಾಗಿರುವ ಪಿಲಿನಲಿಕೆ ಸೇವೆಯನ್ನು ಹೇಮಂತ್ ಕೆದ್ದೇಲುರವರು ಉತ್ತಮ ರೀತಿಯಲ್ಲಿ ಆಯೋಜಿಸಿದ್ದಾರೆ. ಕಲಾಸೇವೆಯನ್ನು ಅರ್ಪಿಸುವುದಲ್ಲದೆ, ತುಳುನಾಡಿನ ಸಂಸ್ಕೃತಿ ಆಚರಣೆಯನ್ನು ಉಳಿಸಿ, ಬೆಳೆಸಿ, ಹತ್ತಾರು ಜನಕ್ಕೆ ಪರಿಚಯಿಸುವ ಕಾರ್ಯವನ್ನೂ ಮಾಡಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ತುಳು ವಿದ್ವಾಂಸರಾದ ದಯಾನಂದ ಕತ್ತಲ್ ಸಾರ್ ಹೇಳಿದರು.
ಅವರು ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ಪಿಲಿನಲಿಕೆ ಕಾರ್ಯಕ್ರಮದ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಕಲೆ ಕಾರಣಿಕದ ನೆಲೆಯಾಗಿದ್ದು, ಪುರಾತನ ಕಾಲದಲ್ಲಿ ಈ ಸನ್ನಿಧಿಯಲ್ಲಿ ಹೊರಾಂಗಣ ಮಾತ್ರವಲ್ಲದೆ ಒಳಂಗಾಣದಲ್ಲೂ ರಥೋತ್ಸವ ನಡೆಯುತ್ತಿದ್ದಂತಹ ವೈಭವದ ಸ್ಥಳವಾಗಿತ್ತು. ಈಗಲೂ ಕ್ಷೇತ್ರದಲ್ಲಿಸಾಕಷ್ಟು ಕಾರಣಿಕವಿದೆ. ನಂಬಿದವರನ್ನು ದೇವಿ ಕೈಬಿಟ್ಟಿಲ್ಲ ಎಂದರು.


ಮುಖ್ಯ ಅತಿಥಿಯಾಗಿದ್ದ ಖ್ಯಾತ ವಕೀಲರಾದ ಬಿ ಧನಂಜಯ್ ರಾವ್ ಮಾತನಾಡಿ, ದೇವಸ್ಥಾನದ ಬ್ರಹ್ಮ ಕಲಶೋತ್ಸವ ಸಮಯದಲ್ಲಿ ಸಹಕರಿಸಿದ ಗ್ರಾಮಸ್ಥರ ಸೇವಾ, ಕಾರ್ಯವನ್ನು ಶ್ಲಾಘಿಸಿ, ಕ್ಷೇತ್ರವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ನಿವೃತ್ತ ಯೋಧರಾದ ಶ್ರೀ ಸುನಿಲ್ ಶೆಣೈ, ಹರೀಶ್ ರೈ, ಕೃಷ್ಣ ಭಟ್ ಉಮೇಶ್ ಬಂಗೇರ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತಿರುವ ಶ್ರೀ ಯಶೋಧರ ಸಾಲ್ಯಾನ್ ಮತ್ತು ಶ್ರೀ ಅನಂತು ಪೈ ಇವರನ್ನು ಚಂದ್ಕೂರು ಶಿವದುರ್ಗಾ ಟೈಗರ್ಸ್ ಪರವಾಗಿ ಗೌರವಿಸಿ, ಸನ್ಮಾನಿಸಲಾಯಿತು.

ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೆಸರರಾದ ಶ್ರೀ ಧನಂಜಯ ಅಜ್ರಿಯವರು ದೀಪ ಪ್ರಜ್ವಲನೆ ಮಾಡಿ, ಶ್ರೀ ಕ್ಷೇತ್ರದಲ್ಲಿ ಪಿಲಿನಲಿಕೆ ಸೇವೆ ಸಲ್ಲಿಸಿದ ಕೆದ್ದೇಲು ಹೇಮಂತ್‌ಗೆ ಶುಭ ಹಾರೈಸಿದರು.
ಸುರ್ಯ ಶ್ರೀ ಸದಾಶಿವೆಶ್ವರ ದೇವಸ್ಥಾನದ ಆಡಳಿತ ಆನುವಂಶಿಕ ಮೊಕ್ತೇಸರರಾದ ಶ್ರೀ ಸತೀಶ್ಚಂದ್ರ, ಲಾಯಿಲ ಗುತ್ತುವಿನ ಚಿತ್ತರಂಜನ್ ಹೆಗ್ಡೆ, ನಾವೂರು ಆರೋಗ್ಯ ಕ್ಲಿನಿಕ್ ನ ವೈದ್ಯ ಡಾ. ಪ್ರದೀಪ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರಾವ್ಯ ಕುತ್ತಾರ್ ಸ್ವಾಗತಿಸಿ, ಚೈತ್ರ.ಕೆ, ಪ್ರಶಸ್ತಿ ಪತ್ರ ವಾಜಿಸಿದರು. ಪ್ರಸಿದ್ಧ ವಿ.ಜೆ. ಶ್ರೀ ಮಧುರಾಜ್ ಮತ್ತು ಶ್ರೀ ಅರವಿಂದ ಶೆಟ್ಟಿ ಲಾಯಿಲಾ ಕಾರ್ಯಕ್ರಮ ನಿರೂಪಿಸಿದರು.

