ಕಾರ್ಕಳ: ಪ್ರೀತಿಸಿದ ಯುವಕನೊಂದಿಗೆ ಮನೆ ಬಿಟ್ಟು ಹೋಗ್ತೇನೆ ಎಂದ ಮಗಳನ್ನು ಕತ್ತು ಹಿಸುಕಿ ಕೊಂದು ತಾಯಿಯೊಬ್ಬಳು ಆತ್ಮಹತ್ಯೆ ಎಂದು ಬಿಂಬಿಸಿ ಕೊನೆಗೆ ಸಿಕ್ಕಿ ಬಿದ್ದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ನಡೆದಿದೆ.

ಹಿರ್ಗಾನ ನಿವಾಸಿ ಶೇಖ್ ಮುಸ್ತಫಾ ಎಂಬವರ ಮಗಳು ಶಿಫನಾಝ್ (17) ಕೊಲೆಯಾದವಳು. ತಾಯಿ ಗುಲ್ಮಾರ್ ಬಾನು (45) ಕೊಲೆ ಮಾಡಿದಾಕೆ. ಇದೀಗ ಗುಲ್ಮಾರ್ ಬಾನುಳನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೆಪ್ಟೆಂಬರ್ 20ರಂದು ತಾಯಿ-ಮಗಳ ನಡುವೆ ಪ್ರೀತಿಯ ವಿಚಾರದಲ್ಲಿ ಜಗಳ ಉಂಟಾಗಿತ್ತು. ಶಿಫನಾಝ್ ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದರಿಂದ ಕುಪಿತಗೊಂಡ ತಾಯಿ, ಮಗಳ ಬಾಯಿಗೆ ಬಟ್ಟೆ ತುರುಕಿಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆಯ ನಂತರ, ಶಿಫನಾಝ್ ತಂದೆ ಮುಸ್ತಫಾ ಅವರು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶಿವನಾಝ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ತಿಳಿದುಬಂದಿತ್ತು. ಪೊಲೀಸರು ಹೆತ್ತವರನ್ನು ವಿಚಾರಿಸಿದಾಗ ಸತ್ಯ ಹೊರಬಂದಿದೆ. ತಾಯಿಯೇ ಮರ್ಯಾದೆಗೆ ಅಂಜಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಕ್ಟೋಬರ್ 2ರಂದು ಆರೋಪಿಯನ್ನು ಕಾರ್ಕಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

