Mon. Oct 13th, 2025

Mangalore : ಡೆತ್ ನೋಟ್ ಬರೆದಿಟ್ಟು ಯುವಕನ ಆತ್ಮಹತ್ಯೆ – ಪ್ರೇಯಸಿ ಸೇರಿ ನಾಲ್ವರ ಮೇಲೆ ಗಂಭೀರ ಆರೋಪ

ಮಂಗಳೂರು (ಅ.09) : ಅಭಿಷೇಕ್ ಆಚಾರ್ಯ (23) ಎಂಬ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳ್ಮಣ್ ನ ಖಾಸಗಿ ಲಾಡ್ಜ್ ನಲ್ಲಿ ನಡೆದಿದೆ. ಈ ಡೆತ್ ನೋಟ್‌ನಲ್ಲಿ ಯುವಕ ತನ್ನ ಸಾವಿಗೆ ನೇರ ಕಾರಣರೆಂದು ನಾಲ್ವರ ಹೆಸರನ್ನು ಉಲ್ಲೇಖಿಸಿದ್ದು, ಅವರ ವಿರುದ್ಧ ಬ್ಲಾಕ್‌ಮೇಲ್ ಮತ್ತು ಹಣಕಾಸಿನ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದಾನೆ.

ಡೆತ್ ನೋಟ್‌ನಲ್ಲಿ ಹೆಸರಿಸಲಾದ ವ್ಯಕ್ತಿಗಳು: ನಿರೀಕ್ಷಾ, ರಾಕೇಶ್, ರಾಹುಲ್ ಮತ್ತು ತಸ್ಲಿಂ.

ಆತ್ಮಹತ್ಯೆಗೆ ಕಾರಣಗಳು (ಡೆತ್ ನೋಟ್‌ನ ಅಂಶಗಳು):

ಬ್ಲಾಕ್‌ಮೇಲ್ ಜಾಲ ಮತ್ತು ಹಣ ಸುಲಿಗೆ:

ನಿರೀಕ್ಷಾ ಮತ್ತು ಅಭಿಷೇಕ್ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಅಭಿಷೇಕ್, ನಿರೀಕ್ಷಾ, ಅಭಿಷೇಕ್‌ನ ರೂಂಮೇಟ್ ತೇಜು ಮತ್ತು ಆತನ ಗೆಳತಿ ಬಜ್ಜೋಡಿ ಬಿಕರ್ನಕಟ್ಟೆ ರೂಮಿಗೆ ಹೋಗಿದ್ದಾಗ, ನಿರೀಕ್ಷಾ ತೇಜುವಿನ ಗೆಳತಿಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಹಿಡನ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ್ದಳು. ನಂತರ, ಆ ವಿಡಿಯೋಗಳನ್ನು ಬಳಸಿ ತೇಜುಗೆ ₹5 ಲಕ್ಷ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿದ್ದಳು. ರೂಂಮೇಟ್ ತೇಜು ಹಣ ಹೊಂದಿಸಲು ಸಾಧ್ಯವಾಗದೆ ಅಂಗಲಾಚಿದಾಗ, ಅಭಿಷೇಕ್ ತಮ್ಮಿಬ್ಬರ ಮಾನ ಮರ್ಯಾದೆ ಹೋಗುತ್ತದೆ ಎಂದು ಹೆದರಿ ಹಣ ಕೊಡಲು ಒಪ್ಪಿಕೊಂಡಿದ್ದ. ಈ ಘಟನೆಯ ನಂತರ ರೂಂಮೇಟ್ ತೇಜು ನಾಪತ್ತೆಯಾಗಿದ್ದಾನೆ.

ವ್ಯಾಪಕವಾದ ಅಶ್ಲೀಲ ಜಾಲದ ಬಯಲು:

ನಿರೀಕ್ಷಾ ಬಳಸುತ್ತಿದ್ದ ವಾಟ್ಸಾಪ್ ವೆಬ್ (WhatsApp Web) ಮೂಲಕ ಅಭಿಷೇಕ್‌ಗೆ ನಿರೀಕ್ಷಾ ಮತ್ತು ಆಕೆಯ ತಂಡದ ಇತರೆ ಚಟುವಟಿಕೆಗಳ ಬಗ್ಗೆ ತಿಳಿದುಬಂದಿದೆ. ಈ ತಂಡವು ಕೆಲವು ಯುವತಿಯರು ಬಟ್ಟೆ ಬದಲಾಯಿಸುವಾಗ ಅವರ ಬೆತ್ತಲೆ ಫೋಟೋಗಳನ್ನು ತೆಗೆದು, ಅದನ್ನು ತಸ್ಲಿಂಗೆ ಕಳುಹಿಸುತ್ತಿತ್ತು. ತಸ್ಲಿಂ ಆ ಫೋಟೋಗಳನ್ನು ವಿದೇಶದಲ್ಲಿರುವ ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದ. ಈ ಜಾಲವು ಬಹಳ ದೊಡ್ಡದಾಗಿದ್ದು, ಅನೇಕ ಯುವತಿಯರ ಜೀವನವನ್ನು ಹಾಳುಮಾಡಿದೆ ಎಂದು ಡೆತ್ ನೋಟ್‌ನಲ್ಲಿ ತಿಳಿಸಲಾಗಿದೆ.

ಅಭಿಷೇಕ್‌ ಮೇಲೆಯೇ ದೌರ್ಜನ್ಯ ಮತ್ತು ಬೆದರಿಕೆ:

ನಿರೀಕ್ಷಾ ಮೊದಲು ಪ್ರೀತಿಯ ನಾಟಕವಾಡಿ ಅಭಿಷೇಕ್‌ನಿಂದಲೇ ಹಣ ದೋಚಿದ್ದಳು. ನಂತರ, ಆತನ ಅಶ್ಲೀಲ ಫೋಟೋಗಳನ್ನು ಮುಂದಿಟ್ಟುಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು, ಹಿಂಸೆ ನೀಡಿದ್ದಳು. ಒಂದು ದಿನ ಬೇಸತ್ತ ಅಭಿಷೇಕ್ ಹಣ ಕೊಡಲು ನಿರಾಕರಿಸಿದಾಗ, ರಾಕೇಶ್, ತಸ್ಲಿಂ ಮತ್ತು ಇತರರು ಸೇರಿ ಆತನಿಗೆ ಹಲ್ಲೆ ನಡೆಸಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ನೇರ ಬೆದರಿಕೆ ಹಾಕಿದ್ದರು.

ಈ ಮಾನಸಿಕ ಮತ್ತು ದೈಹಿಕ ಕಿರುಕುಳ ಹಾಗೂ ಬ್ಲಾಕ್‌ಮೇಲ್‌ನಿಂದ ಬೇಸತ್ತು ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *