ಬೆಂಗಳೂರು (ಅ. 11): ಅವರದ್ದು ಮುದ್ದಾದ ಕುಟುಂಬ. ದಂಪತಿಗೆ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಇದ್ದ. ಮನೆಯಲ್ಲಿ ಬಡತನವಿದ್ದರೂ ಜೀವನ ಸುಂದರವಾಗಿಯೇ ಸಾಗಿತ್ತು. ಈ ನಡುವೆ ಪತಿ ಮತ್ತೋರ್ವಳ ಸಂಗ ಬೆಳೆಸಿದ್ದ. ಅದು ಗಲಾಟೆಗೂ ಕಾರಣವಾಗಿತ್ತು. ಇದರಿಂದ ಬೇಸತ್ತು ಪತ್ನಿ ಕಟು ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇನೆಂದರೆ ಇಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೃದಯ ವಿದ್ರಾವಕ ಘಟನೆ:
ಮಕ್ಕಳಾದ ಬೃಂದ(4) ಮತ್ತು ಒಂದೂವರೆ ವರ್ಷದ ಭುವನ್ ನನ್ನು ಕೊಂದು ತಾಯಿ ವಿಜಯಲಕ್ಷ್ಮೀ ನೇಣಿಗೆ ಶರಣಾದ ಘಟನೆ ನಗರದ ಬಾಗಲಗುಂಟೆ ಬಳಿಯ ಭುವನೇಶ್ವರಿ ನಗರದಲ್ಲಿ ನಡೆದಿದೆ. ವಿಜಯಲಕ್ಷ್ಮೀ ಸಹೋದರಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ಮೂಲತ: ರಾಯಚೂರು ಮೂಲದ ಮಸ್ಕಿಯವರಾದ ವಿಜಯಲಕ್ಷ್ಮೀ ಮತ್ತು ರಮೇಶ್ ದಂಪತಿ, ಕಳೆದ ಐದಾರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮೂರು ವರ್ಷದ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದರು. ಹೀಗೆ ಬಾಗಲಗುಂಟೆಯ ಭುವನೇಶ್ವರಿ ನಗರದಲ್ಲಿ ಬಾಡಿಗೆ ಮನೆ ಪಡೆದು ಕುಟುಂಬ ವಾಸವಾಗಿತ್ತು.

ಗಂಡ ರಮೇಶ್ ಇಲ್ಲದ ಸಮಯದಲ್ಲಿ ಪತ್ನಿ ವಿಜಯಲಕ್ಷ್ಮೀ ಇಬ್ಬರು ಮಕ್ಕಳನ್ನು ನೇಣು ಬಿಗಿದು ತಾನೂ ಫ್ಯಾನಿಗೆ ಕೊರಳೊಡ್ಡಿದ್ದಾರೆ. ಈ ನಡುವೆ ವಿಜಯಲಕ್ಷ್ಮೀ ತಂಗಿ ಮನೆಗೆ ಬಂದಿದ್ದು, ಘಟನೆ ಬೆಳಕಿಗೆ ಬಂದಿದೆ. ಆ ಬಳಿಕ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಾಗಲಗುಂಟೆ ಪೊಲೀಸರು ಮೃತದೇಹಗಳನ್ನ ನೇಣಿನ ಕುಣಿಕೆಯಿಂದ ಇಳಿಸಿ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.

ಗಂಡನಿಗೆ ಮತ್ತೊಂದು ಮದುವೆ:
ಇನ್ನು ವಿಜಯಲಕ್ಷ್ಮೀ ಪತಿ ರಮೇಶ್ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ತಾನು ಮತ್ತೊಂದು ಮದುವೆಯಾಗಿದ್ದು, ಪತ್ನಿಗೆ ಡಿವೋರ್ಸ್ ಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಮನೆಯಲ್ಲಿದ್ದಾಗ ಬೇರೆ ಬೇರೆ ಹುಡುಗಿಯರ ಜೊತೆ ಫೊನ್ನಲ್ಲಿ ಮಾತನಾಡುತ್ತಿದ್ದ. ಇದರಿಂದ ವಿಜಯಲಕ್ಷ್ಮೀ ಮಾನಸಿಕವಾಗಿ ನೊಂದಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ವಿಚಾರವಾಗಿ ಪದೆಪದೇ ಮನೆಯಲ್ಲಿ ಜಗಳ ಕೂಡ ನಡೆಯುತ್ತಿತ್ತು ಎಂದು ರಮೇಶ್ ಮಾವ ಹೇಳಿದ್ದಾರೆ.ಸದ್ಯ ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ರಮೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಏನೇ ಇರಲಿ ಮಕ್ಕಳ ಭವಿಷ್ಯದ ಬಗ್ಗೆ ಸುಂದರವಾದ ಕನಸುಗಳನ್ನ ಕಂಡಿದ್ದ ತಾಯಿಯೇ ತನ್ನ ಕಂದಮ್ಮಗಳ ಉಸಿರನ್ನ ನಿಲ್ಲಿಸಿದ್ದು ದುರ್ದೈವದ ಸಂಗತಿ.

