ಮೈಸೂರು:(ಅ.11) ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಮೈಸೂರು ಪೊಲೀಸರು ನ್ಯಾಯ ಒದಗಿಸುವತ್ತ ಗಂಭೀರವಾಗಿ ಹೆಜ್ಜೆ ಹಾಕಿದ್ದಾರೆ. ಭೀಭತ್ಸ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ವಿಕೃತಕಾಮಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ⭕Uttar Pradesh: ನನ್ನ ಹೆಂಡತಿ ರಾತ್ರಿ ಹಾವಾಗಿ ಬದಲಾಗುತ್ತಾಳೆ, ನನ್ನನ್ನು ಕಚ್ಚುತ್ತಾಳೆ
ಸೆರೆಯಾದ ಕಾಮುಕ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುವ ಯತ್ನ ನಡೆದಾಗ ಕಾಲಿಗೆ ಗುಂಡು ಹಾರಿಸಿ ತಮ್ಮನ್ನ ರಕ್ಷಿಸಿಕೊಂಡಿದ್ದಲ್ಲದೆ ಅತ್ಯಾಚಾರಿಯನ್ನು ಸೆದೆಬಡಿದಿದ್ದಾರೆ. ವಿಜಯನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಜೈಕೀರ್ತಿ ಕಾರ್ಯ ಮೆಚ್ಚುಗೆಗೂ ಪಾತ್ರವಾಗಿ. ಕಾಮುಕನ ಮೇಲೆ ಜೈಕೀರ್ತಿ ಗುಂಡು ಹಾರಿಸದಿದ್ದಲ್ಲಿ ಪೊಲೀಸರಿಗೂ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತಿತ್ತು.ಆ ಕ್ಷಣದಲ್ಲಿ ಜೈ ಕೀರ್ತಿ ತೆಗೆದುಕೊಂಡ ನಿರ್ಣಯ ಗ್ರೇಟ್. ಸದ್ಯ ಜೈ ಕೀರ್ತಿ ಮೈಸೂರಿನ ಸೂಪರ್ ಕಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಯಾವಾಗ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಬೆಳಕಿಗೆ ಬಂತೊ ಆಗ್ಲೇ ಪೊಲೀಸ್ ಕಮೀಷನರ್ ಅಲರ್ಟ್ ಆದ್ರು. ಕೇವಲ 24 ಗಂಟೆಗಳ ಹಿಂದಷ್ಟೇ ದಸರಾ ವಸ್ತುಪ್ರದರ್ಶನದ ಬಳಿ ರೌಡಿ ಶೀಟರ್ ವೆಂಕಟೇಶ್ ಭೀಕರವಾಗಿ ಕೊಲೆಯಾಗಿದ್ದ.ಈ ಪ್ರಕರಣದ ಆರೋಪಿಗಳು ಸರೆಂಡರ್ ಆದಾಗ ಪೊಲೀಸರು ನಿಟ್ಟುಸಿರು ಬಿಡುತ್ತಿದ್ದರು.ವೆಂಕಟೇಶ್ ಹತ್ಯೆ ಪ್ರಕರಣದ ಹಂತಕರನ್ನ ಜೈಲು ಕಂಬಿ ಹಿಂದೆ ಕಳಿಸಿದ ಬೆನ್ನ ಹಿಂದೆಯೇ ಅದೇ(ದಸರಾ ವಸ್ತುಪ್ರದರ್ಶನದ ಬಳಿ) ಸ್ಥಳದಲ್ಲಿ 9 ವರ್ಷದ ಬಾಲಕಿಯ ಮೃತದೇಹ ದೊರೆತಾಗ ಮೈಸೂರಿನ ಜನತೆ ಬೆಚ್ಚಿಬಿದ್ದದ್ದು ಮಾತ್ರವಲ್ಲ.ಪೊಲೀಸರು ಸಹ ವಿಚಲಿತರಾದರು.ಕೇವಲ 24 ಗಂಟೆ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಎರಡು ಹತ್ಯಾ ಪ್ರಕರಣಗಳು ಪೊಲೀಸರ ನಿದ್ದೆ ಕೆಡಿಸಿತು.

ಮಗು ಮೃತದೇಹ ಪತ್ತೆಯಾದ ಸ್ಥಿತಿ ಗಮನಿಸಿದಾಗಲೇ ಪೊಲೀಸರಿಗೆ ಖಚಿತವಾಗಿತ್ತು ಇದು ಅತ್ಯಾಚಾರ ಮತ್ತು ಕೊಲೆ ಎಂದು.ಬಾಲಕಿ ಧರಿಸಿದ್ದ ಕೆಳ ಉಡುಪು ಮಾಯವಾಗಿತ್ತು.ದೇಹದ ಮೇಲೆ 20 ಕ್ಕೂ ಹೆಚ್ಚು ಸ್ಥಳದಲ್ಲಿ ಗಾಯದ ಗುರುತುಗಳು.ಬಾಲಕಿಯ ಖಾಸಗಿ ಅಂಗ ಛಿದ್ರವಾಗಿತ್ತು.ಅದೊಂದು ಭೀಭತ್ಸ ಕೃತ್ಯವೆಂಬುದರಲ್ಲಿ ಸಂಶಯವೇ ಇರಲಿಲ್ಲ.ಧಿಢೀರ್ ಅಲ್ಲಿಗೆ ಹಾಜರಾದ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರರಾಜ್ ತಡಮಾಡದೆ ದುಷ್ಕರ್ಮಿಯ ಪತ್ತೆಗೆ ಡಿಸೈಡ್ ಮಾಡಿ ಮೂರು ತಂಡಗಳನ್ನ ರಚಿಸಿದ್ರು.ವಿಜಯನಗರ ಇನ್ಸ್ಪೆಕ್ಟರ್ ಸುರೇಶ್,ಸಬ್ ಇನ್ಸ್ಪೆಕ್ಟರ್ ಜೈಕೀರ್ತಿ ಹಾಗೂ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಮೂರು ತಂಡ ರಚನೆಯಾಗಿತ್ತು.ಅಷ್ಟರಲ್ಲಿ ಪೊಲೀಸರಿಗೆ ಸಿಸಿ ಕ್ಯಾಮರಾ ಸುಳಿವು ದೊರೆತಿತ್ತು.
ದಸರಾಗಾಗಿ ಬಲೂನ್ ಮಾರಾಟ ಮಾಡಲು ಬಂದ ಒಂದು ಕುಟುಂಬದ ನತದೃಷ್ಟ ಹೆಣ್ಣುಮಗಳು ಈ ಬಾಲಕಿ.ರಾತ್ರಿ ಸುಮಾರು 11 ಗಂಟೆ ವರೆಗೂ ಬೆಲೂನ್ ಹಾಗೂ ಬೊಂಬೆಗಳನ್ನು ಮಾರಾಟ ಮಾಡಿ ಧಣಿವಾದ ಈ ಕುಟುಂಬ ದಸರಾ ವಸ್ತುಪ್ರದರ್ಶನದ ಬಳಿಯೇ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಪ್ಲಾಸ್ಟಿಕ್ ಶೆಡ್ ನಲ್ಲಿ ನಿದ್ರೆಗೆ ಜಾರಿದ್ದಾರೆ. ಹೆತ್ತವರ ಜೊತೆ ಬಾಲಕಿ ಸಹ ಮೊಬೈಲ್ ನಲ್ಲಿ ಸಿನಿಮಾ ವೀಕ್ಷಿಸುತ್ತಾ ನಿದ್ರೆಗೆ ಶರಣಾಗಿದ್ದಾಳೆ. ಕೆಲವೇ ಗಂಟೆಗಳಲ್ಲಿ ಇದು ಶಾಶ್ವತ ನಿದ್ರೆ ಅನ್ನೋ ಕಿಂಚಿತ್ತು ಮಾಹಿತಿ ಇಲ್ಲದ ಹೆಣ್ಣುಮಗು ಕನಸಿನ ಲೋಕಕ್ಕೆ ಜಾರಿದ್ದಾಳೆ. ಈ ಮಧ್ಯೆ ವರುಣನ ಸಿಂಚನ ತಣ್ಣಗಿನ ವಾತಾವರಣ ಗಾಢ ನಿದ್ರೆಗೆ ಜಾರಲು ಸಹಕರಿಸಿದೆ. ವಿಕೃತ ಕಾಮುಕನ ವೇಷದಲ್ಲಿ ಬಂದ ಯಮಕಿಂಕರ ಬಾಲಕಿಯನ್ನು ಮುಕ್ಕಿಬಿಟ್ಟಿದ್ದಾನೆ. ಗಾಢ ನಿದ್ರೆಯಲ್ಲಿದ್ದ ಬಾಲಕಿಯ ಬಾಯಿ ಮುಚ್ಚಿ ಹೊತ್ತೊಯ್ದ ಕಾಮುಕ ಘೋರ ಕೃತ್ಯವೆಸಗಿ ಪರಾರಿಯಾಗಿದ್ದಾನೆ.

ಕುಟುಂಬ ನೆಲೆಸಲು ಹಾಕಿದ್ದ ತಾತ್ಕಾಲಿಕ ಶೆಡ್ ಮುಂಭಾಗವೇ ಇದ್ದ ಮನೆಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ತನ್ನ ಕೆಲಸ ಮಾಡಿದೆ.ವಿಕೃತ ಕಾಮಿ ಬಾಲಕಿಯನ್ನ ಹೊತ್ತೊಯ್ದ ದೃಶ್ಯಗಳು ಕ್ಯಾಮರದಲ್ಲಿ ಸೆರೆಯಾಗಿದೆ.ಕೆಲವೇ ಸಮಯದಲ್ಲಿ ಅತ್ಯಾಚಾರಿಯ ಫೋಟೋಗಳು ಪೊಲೀಸರ ಕೈ ಸೇರಿದೆ.ತಕ್ಷಣವೇ ಆರೋಪಿ ಸೆರೆಗೆ ರಚನೆಯಾದ ತಂಡಕ್ಕೆ ಫೋಟೋಗಳು ರವಾನೆಯಾಗಿದೆ. ಘಟನೆ ನಡೆದ ಸ್ಥಳದಿಂದ ಹೊರಟ ಕಾಮುಕನ MOVEMENTS ಬಗ್ಗೆ ತಂಡ ಮಾಹಿತಿ ಪಡೆದಿದೆ.ಅಲ್ಲಿಂದ ಮುಂದೆ ಸಾಗುವ ಎಲ್ಲಾ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಅತ್ಯಾಚಾರಿ ಕೊನೆಗೆ ನಿಂತಿದ್ದು ಹಳೆ RMC ಖಾಸಗಿ ಬಸ್ ಸ್ಟ್ಯಾಂಡ್ ಬಳಿ. ಖಾಸಗಿ ಬಸ್ ಸ್ಟ್ಯಾಂಡ್ ನಲ್ಲಿದ್ದ ಕೆಲವು ವ್ಯಕ್ತಿಗಳನ್ನು ವಿಚಾರಿಸಿದಾಗ ಈತ ಕಾರ್ತಿಕ್@ಗರಡಿ ಎಂಬ ವಿಚಾರ ಬೆಳಕಿಗೆ ಬಂದಿದೆ.ಬಸ್ ಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದರು, ಸಿದ್ದಲಿಂಗಪುರದ ನಿವಾಸಿ ಎಂದು ಗೊತ್ತಾಗಿದೆ.ಬೆಳಿಗ್ಗೆ ಸುಮಾರು 10 ಗಂಟೆ ವೇಳೆಯಲ್ಲಿ ಕೊಳ್ಳೆಗಾಲ ಬಸ್ ಹತ್ತಿ ಹೊರಟ ಮಾಹಿತಿ ಲಭ್ಯವಾಗಿದೆ.ತಡಮಾಡದ ತಂಡ ಕೊಳ್ಳೇಗಾಲಕ್ಕೆ ಪ್ರಯಾಣಿಸಿದೆ.ಕೊಳ್ಳೆಗಾಲದ ಭೀಮನಗರ,ಆದರ್ಶನಗರದಲ್ಲಿ ತಂಡ ಹುಡುಕಾಟ ನಡೆಸಿದಾಗ ಕಾರ್ತಿಕ್ ಪತ್ತೆಯಾಗಿಲ್ಲ.ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಇರುವ ಹೊಂಗೆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಕಾರ್ತಿಕ್ ಪೊಲೀಸರ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ.ಪೊಲೀಸರು ಸುತ್ತುವರೆಯುತ್ತಿದ್ದಂತೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.ಆದ್ರೆ ಪೊಲೀಸರು ಹೆಣೆದ ಬಲೆಗೆ ಸುಲಭವಾಗಿ ಸಿಕ್ಕಿಬಿದ್ದಿದ್ದಾನೆ.ಮೈಸೂರಿನತ್ತ ಕರೆತರುತ್ತಿದ್ದಾಗ ಆತನ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಬಿಎಂಶ್ರೀ ನಗರದ ಬಳಿ ತನ್ನ ಮನೆ ಇರುವುದಾಗಿ ತಿಳಿಸಿದ್ದು ತಲಾಶೆಗಾಗಿ ಹಾಗೂ ಮನೆ ಶೋಧನೆ ಮಾಡಿ ಆತನ ವೋಟರ್ ಐಡಿ ಪಡೆಯುವ ಉದ್ದೇಶದಿಂದ ಬಿಎಂಶ್ರೀ ನಗರದತ್ತ ಕರೆತಂದಿದ್ದಾರೆ.ರಿಂಗ್ ರೋಡ್ ಬಳಿ ಗುಡ್ ಶೆಡ್ ಬಳಿ ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ್ದಾನೆ.ಎಚ್ಚರಿಕೆಯಿಂದ ಆತನ ಹಿಂದೆಯೇ ಪೊಲೀಸರು ಇದ್ದು ಮೂತ್ರವಿಸರ್ಜನೆಗೆ ಅವಕಾಶ ಕೊಟ್ಟಿದ್ದಾರೆ.ಹತ್ತಿರದಲ್ಲೇ ಬಿದ್ದಿದ್ದ ಬಿಯರ್ ಬಾಟಲ್ ಎತ್ತಿಕೊಂಡ ಕಾರ್ತಿಕ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ಸಿಬ್ಬಂದಿಗಳಾದ ಪ್ರಕಾಶ್ ಹಾಗೂ ವೆಂಕಟೇಶ್ ಹಿಡಿಯಲು ಪ್ರಯತ್ನಿಸಿದಾಗ ವೆಂಕಟೇಶ್ ಗೆ ಬಾಟಲ್ ನಿಂದ ಇರಿದಿದ್ದಾನೆ.ಆ ಸಮಯದಲ್ಲಿ ಸಬ್ ಇನ್ಸ್ಪೆಕ್ಟರ್ ಜೈ ಕೀರ್ತಿ ಪಿಸ್ತೂಲು ಹಿಡಿದು ಎಚ್ಚರಿಕೆ ನೀಡಿದ್ದಾರೆ.ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದಾರೆ.ಹೀಗಿದ್ದರೂ ಬಾಟಲ್ ಹಿಡಿದು ಜೈಕೀರ್ತಿ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ.ಕಾರ್ತಿಕ್ ನ ವರ್ತನೆ ನಿಯಂತ್ರಿಸಲು ಸಾಧ್ಯವಾಗದ ಹಿನ್ನಲೆ ಜೈಕೀರ್ತಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.ಮುದುರಿಕೊಂಡು ಶರಣಾದ ಕಾರ್ತಿಕ್ ಹಾಗೂ ಗಾಯಗೊಂಡ ಸಿಬ್ಬಂದಿ ವೆಂಕಟೇಶ್ ರನ್ನ ಕೆ.ಆರ್.ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ಜೈ ಕೀರ್ತಿ ಹಾಗೂ ಪ್ರಕಾಶ್ ರವರಿಗೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂತರ ಕಾರ್ತಿಕ್ ಬಗ್ಗೆ ಹಿನ್ನಲೆ ಕೆದಕಿದ ಪೊಲೀಸರಿಗೆ ಕೊಳ್ಳೆಗಾಲದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗುವ ಪ್ರಯತ್ನ ಮಾಡಿ ಶಿಕ್ಷೆ ಅನುಭವಿಸಿದ್ದ ಅಪರಾಧಿ ಎಂದೂ ಸಹ ತಿಳಿದು ಬಂದಿದೆ.ಒಟ್ಟಾರೆ ಸಿಸಿ ಕ್ಯಾಮರಾ ನೀಡಿದ ಸುಳಿವು ಅತ್ಯಾಚಾರಿಯ ಸೆರೆಗೆ ನೆರವಾಗಿದೆ.ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಜೈಕೀರ್ತಿ ಗುಂಡು ಹಾರಿಸುವ ದಿಟ್ಟ ನಿರ್ಧಾರ ಕೈಗೊಳ್ಳದಿದ್ದಲ್ಲಿ ಕಾಮುಕನಿಂದ ಮತ್ತಷ್ಟು ಅನಾಹುತ ನಡೆಯುತ್ತಿತ್ತು.ಸದ್ಯ ಬಾಲಕಿಯನ್ನ ವಿಕೃತವಾಗಿ ಅತ್ಯಾಚಾರವೆಸಗಿ ಹತ್ಯೆಗೈದ ಕಾಮುಕ ಕಾರ್ತಿಕ್ ಸೆರೆ ಹಿಡಿದ ಮೈಸೂರು ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.ಹಾಗೆಯೇ ಜೈ ಕೀರ್ತಿ ರವರು ಸೂಪರ್ ಕಾಪ್ ಎಂಬ ಹೆಸರೂ ಗಳಿಸಿದ್ದಾರೆ.
