ಉಜಿರೆ (ಅ.11): ಪ್ಲಾಸ್ಟಿಕ್ ಸೇರಿದಂತೆ ಹಾನಿಕಾರಕ ತ್ಯಾಜ್ಯಗಳನ್ನು ಎಸೆಯುವ ಪರಿಸರವಿರೋಧಿ ನಡೆಗಳು ವಿಶ್ವಮಟ್ಟದಲ್ಲಿ ವ್ಯಾಪಕವಾಗುತ್ತಿರುವಾಗ ಭೂಮಿಯ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಸರ್ಗಪರ ಹೆಜ್ಜೆಗಳು ವಿಸ್ತಾರಗೊಳ್ಳಬೇಕು ಎಂದು ಜರ್ಮನಿಯ ಯುನಿವರ್ಸಿಟಿ ಆಫ್ ಲೈಪ್ಜಿಗ್‌ನ ಫೆಲಿಕ್ಸ್ ಬ್ಲೋಚ್ ಇನ್ಸಿಟಿಟ್ಯೂಟ್ ಸಂಶೋಧಕರಾದ ಡಾ.ಸಹನಾ ರೋಝ್ಲರ್ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಇನೋವೇಷನ್ಸ್ ಇನ್ ಕೆಮಿಸ್ಟ್ರಿ: ಮೆಟೀರಿಯಲ್ಸ್ ಆ್ಯಂಡ್ ಮೆಡಿಸಿನ್ಸ್ ಫಾರ್ ಸಸ್ಟೇನೇಬಲ್ ಸೊಸೈಟಿ
ಶೀರ್ಷಿಕೆಯಡಿ ಹಮ್ಮಿಕೊಂಡ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣ ಪ್ರಸ್ತುತಪಡಿಸಿ ಮಾತನಾಡಿದರು.

ಇದನ್ನೂ ಓದಿ: 🔴ಬೆಳ್ತಂಗಡಿ: ಸಿಯೋನ್ ಆಶ್ರಮ (ರಿ.)ದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಜರ್ಮನಿಯಂತಹ ರಾಷ್ಟ್ರ ಅಟೋಮೊಬೈಲ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ವ್ಯಾಪಕ ಯಶಸ್ಸು ಕಂಡುಕೊಂಡಿದೆ. ಆದರೆ, ಪರಿಸರ ಮತ್ತು ಅಭಿವೃದ್ಧಿಯನ್ನು
ಸಮತೋಲನಗೊಳಿಸಿಕೊಳ್ಳುವ ವಿಷಯದಲ್ಲಿ ಸವಾಲು ಎದುರಿಸುತ್ತಿದೆ. ಇದೇ ಬಗೆಯ ಸಂದಿಗ್ಧತೆ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ
ರಾಷ್ಟ್ರಗಳದ್ದಾಗಿದೆ. ನಿಸರ್ಗಪರ ನಿಲುವುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಭೂಮಿಯ ಸುಸ್ಥಿರತೆಯನ್ನು ಕಾಯ್ದುಕೊಳ್ಳಬೇಕಿದೆ ಎಂದರು.

ಜರ್ಮನಿಯಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಾರ್ವಜನಿಕ ತ್ಯಾಜ್ಯ ನಿರ್ವಹಣೆ ಮತ್ತು ಸಾರ್ವಜನಿಕ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ, ಪರಿಸರಕ್ಕೆ ಮಾರಕವಾಗುವ ಜೀವನಶೈಲಿ ಸುಸ್ಥಿರ ಅಭಿವೃದ್ಧಿಗೆ ಸವಾಲಾಗಿ ಪರಿಣಮಿಸಿದೆ. ಭಾರತದಲ್ಲೂ ಕೂಡಾ ಪರಿಸರಕ್ಕೆ ಮಾರಕವಾಗುವ ಜೀವನಶೈಲಿಯ ಜೊತೆಗೇ ಸಾರ್ವಜನಿಕ ತ್ಯಾಜ್ಯ ನಿರ್ವಹಣೆ ಮತ್ತು ಶುಚಿತ್ವದ ಅಸಡ್ಡೆ ಪರಿಸರಕ್ಕೆ ಹಾನಿಕಾರಕವಾಗಿದೆ ಎಚಿದು ಕಳವಳ ವ್ಯಕ್ತಪಡಿಸಿದರು.
ಕೆರೆಗಳ ಸಂರಕ್ಷಣೆ, ಮಳೆನೀರು ಕೊಯ್ಲು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಕಾಳಜಿಯುತ ಹೆಜ್ಜೆಗಳ ಮೂಲಕ ನಾವೆಲ್ಲರೂ ಒಂದಾಗಿ
ಮನುಕುಲದ ಏಕೈಕ ನೆಲೆಯಾದ ಭೂಮಿಯನ್ನು ಸಾಂತ್ವನಗೊಳಿಸಲೇಬೇಕಾದ ಅನಿವಾರ್ಯತೆ ಇದೆ ಎಂದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಿ ಶಿವರಾಮ ಹೊಳ್ಳ ಮಾತನಾಡಿದರು. ಶೈಕ್ಷಣಿಕವಾಗಿ ಪ್ರಬುದ್ಧತೆಯುಳ್ಳ ವಿದ್ಯಾರ್ಥಿಗಳು ಸಂಶೋಧನಾ ವಲಯವನ್ನು ಪ್ರವೇಶಿಸಬೇಕು. ಸ್ನಾತಕೋತ್ತರ ಅಧ್ಯಯನ ಪೂರೈಸಿದ ನಂತರ ಉದ್ಯಮ ಮತ್ತು ಇತರೆ ಔದ್ಯೋಗಿಕ ವಲಯಗಳನ್ನು ಆಯ್ದುಕೊಳ್ಳದೇ ಉನ್ನತ ಶಿಕ್ಷಣವನ್ನು ಬಲಪಡಿಸುವ ಸಂಶೋಧನಾ ಕ್ಷೇತ್ರವನ್ನು ಆಯ್ದುಕೊಳ್ಳಬೇಕು. ಇಲ್ಲದಿದ್ದರೆ ರಾಷ್ಟçದ ಪ್ರಗತಿಯ ಹೆಜ್ಜೆಗಳು ಮೊಟಕುಗೊಳ್ಳುತ್ತವೆ ಎಂದರು.
ಬೆಂಗಳೂರಿನ ಆಂಥಮ್ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಡಾ. ಸುಮೇಶ್ ಈಶ್ವರನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ ಮಾತನಾಡಿದರು. ರಸಾಯನಶಾಸ್ತ್ರ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಅದ್ಭುತ ಕೊಡುಗೆಗಳಾಗಲಿವೆ ಎಂದರು.

ಸಹ ಪ್ರಾಧ್ಯಾಪಕಿ ಡಾ. ನಫೀಸತ್ ಪಿ ಸಮ್ಮೇಳನದ ಸಮಗ್ರ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕಿ ಹಾಗೂ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ವಂದಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ
ಡಾ.ಶಶಿಪ್ರಭಾ ಉಪಸ್ಥಿತರಿದ್ದರು. ವಿಚಾರ ಸಂಕಿರಣದ ಗೋಷ್ಠಿಗಳಲ್ಲಿ ಮಂಡಿಸಿದ ಉತ್ತಮ
ಸಂಶೋಧನಾ ಪ್ರಬಂಧಗಳು ಮತ್ತು ಪೋಸ್ಟರ್ ಪ್ರಸ್ತುತಪಡಿಸಿದವರಿಗೆ ಬಹುಮಾನ ನೀಡಲಾಯಿತು. ಎನ್.ಐ.ಟಿ.ಕೆ. ಸುರತ್ಕಲ್‌ನ ಸಂಶೋಧನಾ ವಿದ್ಯಾರ್ಥಿ ಶಿವರಾಮ, ಮೈಸೂರಿನ ಜೆ.ಎಸ್.ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಲಕ್ಷ್ಮಿ ಜೆ, ಕಾರ್ಕಳದ
ಎನ್.ಎಂ.ಎ.ಎಂ ತಾಂತ್ರಿಕ ಸಂಸ್ಥೆ ಸಂಶೋಧನಾ ವಿದ್ಯಾರ್ಥಿ ಯಶಿಕ ಪಿ.ಬಿ, ಗೋವಾದ ಸಿಂಜೆಂಟಾ ಬಯೋಸೈನ್ಸಸ್ ಸಂಶೋಧನಾ ವಿದ್ಯಾರ್ಥಿ
ಅಮೋಲ್ ಸತೀಶ್ ಡಿ, ಜೈನ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ವಾತಿ ದಿವಾಕರ್, ಮಂಗಳೂರಿನ ಸೇಂಟ್ ಆ್ಯಗ್ನೆಸ್ ಕಾಲೇಜಿನ ಲಾವಣ್ಯ
ಬಹುಮಾನಿತರಾದರು.

