ಮಂಗಳೂರು (ಅ.12) : ಖ್ಯಾತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಮಂಗಳೂರಿನ ಕಲ್ಕೂರ ಪ್ರತಿಷ್ಠಾನವು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ‘ಕಾರಂತ ಪ್ರಶಸ್ತಿ 2025’ ನೀಡಿ ಗೌರವಿಸಲು ನಿರ್ಧರಿಸಿದೆ.

ಕಳೆದ 43 ವರ್ಷಗಳಿಗೂ ಹೆಚ್ಚು ಕಾಲ ಶಾಸಕರಾಗಿ ಸೇವೆ ಸಲ್ಲಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿರುವ ಹಾಗೂ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ಅವರ ಹಿತಾಸಕ್ತಿಗಳ ರಕ್ಷಣೆಗಾಗಿ ಶ್ರಮಿಸಿರುವ ಹೊರಟ್ಟಿಯವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಚಿಂತಕರು ಮತ್ತು ಪ್ರಾಮಾಣಿಕ ರಾಜಕಾರಣಿ ಎಂದು ಹೆಸರಾಗಿರುವ ಇವರು ಸತತವಾಗಿ ಎಂಟನೇ ಬಾರಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಪ್ರತಿಷ್ಠಾನವು ರಾಜಕೀಯ ನಾಯಕರೊಬ್ಬರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲು.

ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 14 ರಂದು ಮಂಗಳೂರು ನಗರದ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಧರ್ಮ ಅವರು ಹೊರಟ್ಟಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ವಿವೇಕ್ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿದ್ವಾಂಸ ಎಂ. ಪ್ರಭಾಕರ ಜೋಷಿ ಕಾರಂತರ ಕುರಿತು ಉಪನ್ಯಾಸ ನೀಡಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
