Wed. Oct 15th, 2025

Bengaluru: ಇಂಜೆಕ್ಷನ್​ ನೀಡಿ ವೈದ್ಯೆ ಪತ್ನಿ ಕೊಂದ ಡಾಕ್ಟರ್​ – ಕಾರಣವೇನು ಗೊತ್ತಾ??

ಬೆಂಗಳೂರು (ಅ.15): ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಆದರೆ ಬೆಂಗಳೂರಲ್ಲೊಬ್ಬ ವೈದ್ಯ ತನ್ನ ಪತ್ನಿ ಪಾಲಿಗೆ ಯಮನಾಗಿದ್ದಾನೆ.

ಇದನ್ನೂ ಓದಿ: ⭕ಕುಂದಾಪುರ: ಕ್ರೇನ್‌ ಹರಿದು ಯುವಕ ಸ್ಪಾಟ್‌ ಡೆತ್..!

ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್​ ನೀಡಿ ಕೊಂದು, ಇದೊಂದು ಸ್ವಾಭಾವಿಕ ಸಾವು ಎಂಬಂತೆ ಕುಟುಂಬಸ್ಥರನ್ನು ನಂಬಿಸಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಲೆ ನಡೆದ 6 ತಿಂಗಳ ನಂತರ ಅಸಲಿ ಸತ್ಯ ಹೊರಬಂದಿದ್ದು, ಆರೋಪಿ ಡಾ. ಮಹೇಂದ್ರರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹ ನಡೆದಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ, ಅಜೀರ್ಣ, ಗ್ಯಾಸ್ಟ್ರಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ, ಆ ಬಳಿಕ ಹೆಂಡತಿಯ ಆರೋಗ್ಯ ಸಮಸ್ಯೆ ವಿಷಯ ಪತಿಗೆ ಗೊತ್ತಾಗಿತ್ತು. ಪ್ರತಿದಿನ ವಾಂತಿ, ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲ್ಲಲು ಮಹೇಂದ್ರರೆಡ್ಡಿ ಪ್ಲ್ಯಾನ್​ ಮಾಡಿದ್ದ. ಹುಷಾರಿಲ್ಲದೆ ತವರುಮನೆಯಲ್ಲಿ ವೈದ್ಯೆ ಡಾ.ಕೃತಿಕಾರೆಡ್ಡಿ ಮಲಗಿದ್ದ ವೇಳೆ ಅಲ್ಲಿಗೆ ಬಂದಿದ್ದ ಈತ ಆಕೆಗೆ ಐವಿ ಇಂಜೆಕ್ಷನ್ ಮೂಲಕ ಎರಡು ದಿನ ಒಂದಷ್ಟು ಔಷಧ ನೀಡಿದ್ದ. ಬಳಿಕ ಜ್ಞಾನ ತಪ್ಪಿದ್ದ ಕೃತಿಕಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದಾಗಲೇ ಅವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದರು.

ಘಟನೆ ಬಗ್ಗೆ ಅಸ್ಪತ್ರೆಯಿಂದ ಡೆತ್ ಮೆಮೊ ಬಂದ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಈ ಬಗ್ಗೆ ದೂರು ನೀಡುವಂತೆ ತಿಳಿಸಿದ್ದರು. ಕುಟುಂಬಸ್ಥರ ದೂರಿನ ಅನ್ವಯ ಯುಡಿಆರ್ ದಾಖಲು ಮಾಡಿದ್ದ ಮಾರತಹಳ್ಳಿ ಪೊಲೀಸರು, ಮೃತ ದೇಹದ ಸ್ಯಾಂಪಲ್ ಪಡೆದು FSLಗೆ ಕಳುಹಿಸಿದ್ದರು. ಈಗ ಅದರ ವರದಿ ಕೈಸೇರಿದ್ದು, ಕೃತಿಕಾ ಸಾವಿಗೆ ದೇಹದಲ್ಲಿ ಕಂಡುಬಂದಿರುವ ಅನಸ್ತೇಶಿಯಾ ಅಂಶ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಯುಡಿಆರ್​ ಆಗಿದ್ದ ಪ್ರಕರಣವನ್ನು ಕೊಲೆ ಕೇಸ್​ ಆಗಿ ಪರಿವರ್ತಿಸಿರೋ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *