ಬೆಂಗಳೂರು (ಅ.16): ವೈದ್ಯ ಡಾ. ಮಹೇಂದ್ರ ರೆಡ್ಡಿ ಎಂಬಾತ ತನ್ನ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ವಿಚಾರ 6 ತಿಂಗಳ ನಂತರ ಬಯಲಾಗಿದ್ದು, ಸದ್ಯ ಆರೋಪಿ ಬೆಂಗಳೂರಿನ ಮಾರತಹಳ್ಳಿ ಪೊಲೀಸರ ವಶವಾಗಿದ್ದಾನೆ. ಮೃತ ಡಾ.ಕೃತಿಕಾ ರೆಡ್ಡಿಗೆ ಅನಾರೋಗ್ಯವಿತ್ತು. ಅದನ್ನು ಮುಚ್ಚಿಟ್ಟು ವಿವಾಹ ಮಾಡಿದ ಕಾರಣಕ್ಕೆ ಡಾ. ಮಹೇಂದ್ರ ರೆಡ್ಡಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೆ, ಈ ಕೊಲೆ ಪ್ರಕರಣ ಸಂಬಂಧ ಇದೀಗ ಸ್ಟೋಟಕ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಕುರಿತು ಕೃತಿಕಾ ಸಹೋದರಿ ಡಾ. ನಿಖಿತಾ ಅವರು ಮಾತನಾಡಿದ್ದು, ಅಕ್ಕನ ಸಾವಿಗೆ ಪತಿ ಮಹೇಂದ್ರನೇ ಕಾರಣ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ.

ಡಾ. ಮಹೇಂದ್ರ ರೆಡ್ಡಿಗೆ ಅನೈತಿಕ ಸಂಬಂಧ ಇತ್ತು: ಡಾ. ನಿಖಿತಾ ಆರೋಪ
ಕೃತಿಕಾ ಮೃತಪಟ್ಟ ದಿನವೇ ನಮಗೆ ಅನುಮಾನ ಬಂದಿತ್ತು. ಆಗಲೇ ಪೋಸ್ಟ್‌ಮಾರ್ಟಂ ಮಾಡಬೇಕು ಎಂದು ನಾವು ಒತ್ತಾಯಿಸಿದ್ದೆವು. ಆದರೆ ಮಹೇಂದ್ರ ಪೋಸ್ಟ್‌ಮಾರ್ಟಂ ಬೇಡ ಎಂದು ನಾಟಕ ಮಾಡಿದರು. ನಂತರ ತನಿಖೆಯ ವೇಳೆ ಮಹೇಂದ್ರಗೆ ಅನೈತಿಕ ಸಂಬಂಧವಿತ್ತು ಎಂಬುದು ಗೊತ್ತಾಯಿತು ಎಂದು ನಿಖಿತಾ ಹೇಳಿದ್ದಾರೆ.

‘ಕೃತಿಕಾ ಕ್ಲಿನಿಕ್ ತೆರೆಯುವ ಆಸೆ ಹೊಂದಿದ್ದರು. ಆದರೆ ಮಹೇಂದ್ರ ಯಾವತ್ತೂ ಬೆಂಬಲ ನೀಡಲಿಲ್ಲ. ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಲು ಸಹ ಒಪ್ಪಲಿಲ್ಲ. ಕೃತಿಕಾ ಅಸೌಖ್ಯದಲ್ಲಿದ್ದಾಗಲೂ ಪತಿಯೇ ಡ್ರಿಪ್ ಹಾಕುತ್ತಿದ್ದರು. ಮಹೇಂದ್ರ ನನಗೆ ಅನಾವಶ್ಯಕ ಚಿಕಿತ್ಸೆ, ಔಷಧ ಕೊಡುತ್ತಿದ್ದಾರೆ ಎಂದು ಆಕೆ ನನ್ನ ಬಳಿ ಹೇಳಿದ್ದಳು’ ಎಂದು ಡಾ. ನಿಖಿತಾ ಹೇಳಿದ್ದಾರೆ.

ಕೃತಿಕಾ ಕುಟುಂಬದವರು ಆಕೆಯ ಸಮಾಜ ಸೇವಾ ಕನಸುಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಅವಳು ಬಡ ಜನರಿಗೆ ಉಚಿತ ಮೆಡಿಕಲ್ ಕ್ಯಾಂಪ್ ಮಾಡಲು ಬಯಸುತ್ತಿದ್ದಳು. ದೇಶಕ್ಕೆ ಉಪಕಾರ ಮಾಡಬೇಕೆಂದಿದ್ದಳು ಎಂದು ತಿಳಿಸಿದ್ದಾರೆ. ಅಲ್ಲದೆ, ತೀವ್ರ ದುಃಖದಿಂದ ಬಳಲುತ್ತಿರುವ ಕುಟುಂಬ, ಕೃತಿಕಾ ವಾಸಿಸುತ್ತಿದ್ದ ಮನೆಯನ್ನು ಇಸ್ಕಾನ್ ದೇವಾಲಯಕ್ಕೆ ದಾನ ಮಾಡಿದೆ. ಆ ಮನೆಯಲ್ಲಿ ಇರುವುದು ನಮ್ಮಿಂದಾಗದು. ಆದ್ದರಿಂದ ದೇವರಿಗೆ ಸಮರ್ಪಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

