ಉಜಿರೆ : ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ, ದಿಕ್ಸೂಚಿ ನೀಡದೇ ಹೋದರೆ ಏನಾಗಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆಗಳು ನಮ್ಮ ಮುಂದಿದ್ದು, ದೇಶ ಸುಭಿಕ್ಷವಾಗಬೇಕಾದರೆ ಯುವಜನಾಂಗ ಸರಿದಾರಿಯಲ್ಲಿ ನಡೆಯುವುದು ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ (Additional Superintendent of Police) ಅನಿಲ್ ಕುಮಾರ್ ಭೂಮರೆಡ್ಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಮಂಗಳೂರು: ತೆಂಕುತಿಟ್ಟಿನ ಯಕ್ಷಗಾನ ಪರಂಪರೆಯ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ
ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕ ದಿನದ ಅಂಗವಾಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಅ.15 ರಂದು ಎನ್ನೆಸ್ಸೆಸ್ ಘಟಕ ಹಾಗೂ ಮಂಗಳೂರು ವಿವಿ ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ‘ನಶಾ ಮುಕ್ತ ಭಾರತ’ ರಾಷ್ಟ್ರೀಯ ಅಭಿಯಾನ ಕುರಿತ ಜಾಗೃತಿ ಮತ್ತು ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಯುವಶಕ್ತಿಯು ದೇಶದ ದೊಡ್ಡ ಶಕ್ತಿ ಎನಿಸಿದ್ದರೂ, ಆ ಶಕ್ತಿ ನಕಾರಾತ್ಮಕವಾಗಿ ಬದಲಾದಾಗ ಶ್ರೀಲಂಕಾ, ಬಾಂಗ್ಲಾ, ನೇಪಾಳ ದೇಶಗಳಲ್ಲಿ ಉಂಟಾದಂತೆ ರಾಜಕೀಯ ವಿಪ್ಲವ, ದಂಗೆಗೆ ಕಾರಣವಾಗುತ್ತದೆ ಎಂಬುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಹಾಗಾಗಿ ಯುವಜನಾಂಗಕ್ಕೆ ಮಾರ್ಗದರ್ಶನ ಮಾಡುವ ಗುರುತರ ಜವಾಬ್ದಾರಿ ಪೊಲೀಸ್, ಸರಕಾರ, ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಅವರು ಹೇಳಿದರು.
ಮನಸ್ಸು ಮಾಡಿದರೆ ದೇಶ ಕಟ್ಟುವ ಸಾಮರ್ಥ್ಯ ಯುವಜನರ ಕೈಯಲ್ಲಿದೆ. ಆದರೆ, ಮೋಜು ಮಸ್ತಿ ನೆಪದಲ್ಲಿ ಕ್ಷಣಿಕ ಸುಖಕ್ಕಾಗಿ ದುಶ್ಚಟಗಳ ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಟದ ಸಂಗತಿ. ದೇಶದ ಅಳಿವು ಉಳಿವು ನಿಮ್ಮ ಕೈಯ್ಯಲ್ಲಿದೆ. ಯುವಜನತೆಯ ಆಲೋಚನಾ ಕ್ರಮ ಕಲುಷಿತವಾದರೆ ಅದರಷ್ಟು ಮಾರಕ ಮತ್ತೊಂದಿಲ್ಲ. ಕುಟುಂಬ ಪದ್ಧತಿ ಭಾರತದ ದೊಡ್ಡ ಆಸ್ತಿ. ಆದರೆ ಪ್ರಸ್ತುತ ದಿನಗಳಲ್ಲಿ ಕುಟುಂಬಗಳು ಮಾತ್ರ ವಿಭಜನೆಯಾಗಿಲ್ಲ ಬದಲಿಗೆ ಮನಸ್ಸುಗಳು ಕೂಡ ಒಡೆದಿವೆ. ಇದರ ಪರಿಣಾಮ ಒತ್ತಡದ ಬದುಕಿನಲ್ಲಿ ಪೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಮೇಲ್ವಿಚಾರಣೆ ಮಾಡದಿರುವುದು ಕೂಡ ಮಕ್ಕಳು ದುಶ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ಮುಖ್ಯ ಕಾರಣ ಆಗಿರಬಹುದು ಎಂದರು.
ಕೇಂದ್ರ ಸರಕಾರವು ಗೃಹ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿ ಬಿ) ಮೂಲಕ ನಶಾ ಮುಕ್ತ ಭಾರತ ಅಭಿಯಾನ ನಡೆಸುತ್ತಿದೆ. ಡ್ರಗ್ ವಿರುದ್ಧ ಹೋರಾಟಕ್ಕಾಗಿ ಎನ್ ಸಿ ಬಿಯ ‘ಮಾನಸ್’ ಸಹಾಯವಾಣಿ ಮಾದರಿಯಲ್ಲಿ ಕರ್ನಾಟಕದಲ್ಲಿ ರಾಜ್ಯ ಪೊಲೀಸ್ ವತಿಯಿಂದ ‘ಡ್ರಗ್ ಫ್ರೀ ಕರ್ನಾಟಕ’ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಅದರ ಮೂಲಕ, ಗಾಂಜಾ ಬೆಳೆಯುವಿಕೆ, ಸಾಗಾಣಿಕೆ, ಸಂಗ್ರಹ, ಮಾರಾಟ ಹಾಗೂ ಸೇವನೆ ಕಂಡು ಬಂದ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಮಾಹಿತಿ ನೀಡಬಹುದು. ಅಲ್ಲದೆ, ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಶಾಲೆ, ಕಾಲೇಜು ಕ್ಯಾಂಪಸ್ ನಲ್ಲಿ ಕ್ಯು ಆರ್ ಕೋಡ್ ಮೂಲಕ ಡ್ರಗ್ ಸಂಬಂಧಿತ ಮಾಹಿತಿ/ದೂರು ನೀಡುವಂತೆ ವ್ಯವಸ್ಥೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವ ವ್ಯವಸ್ಥೆಯೂ ಇದ್ದು, ಇವುಗಳ ಮೂಲಕ ಯುವಜನತೆ ನಶಾ ಮುಕ್ತ ಭಾರತ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಯೋಗ ನೀಡಬೇಕು ಎಂದರು.
ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ವಿದ್ಯಾರ್ಥಿಗಳು ತಾವು ಕೈಗೊಂಡಿರುವ ಪ್ರತಿಜ್ಞೆಯನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕು. ನಿಮ್ಮ ಮೇಲಿನ ಸಮಾಜದ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಕೂಡ ಸ್ವಾಸ್ಥ್ಯ ಸಂಕಲ್ಪ ಯೋಜನೆಯಡಿ ಮದ್ಯವರ್ಜನ ಶಿಬಿರ, ಜನಜಾಗೃತಿ ವೇದಿಕೆ ಇತ್ಯಾದಿ ಕಾರ್ಯಕ್ರಮ ಮೂಲಕ ಸಮಾಜದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದರು.
ಮಂಗಳೂರು ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಅಮೀನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಡ್ರಗ್ ಬಳಕೆ ಹೆಚ್ಚಳ ತಲೆತಗ್ಗಿಸುವ ವಿಚಾರ. ಇಂದು ಇಲ್ಲಿನ ನಶಾ ಮುಕ್ತ ಭಾರತ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ತಲಾ 15 ಎನ್ನೆಸ್ಸೆಸ್ ಸ್ವಯಂಸೇವಕರು ಆಗಮಿಸಿದ್ದಾರೆ. ವಿವಿ ವ್ಯಾಪ್ತಿಯ ಒಟ್ಟು 106 ಕಾಲೇಜುಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿವಿ ವ್ಯಾಪ್ತಿಯ ಎಸ್ ಡಿ ಎಂ ಕಾಲೇಜಿನ ಎನ್ನೆಸ್ಸೆಸ್ ಘಟಕವು ವಿಶೇಷ ಖ್ಯಾತಿ ಪಡೆದಿದೆ. ಈ ಘಟಕವು ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಹತ್ವದ ಕೊಡುಗೆಯನ್ನು ನೀಡಿದೆ ಎಂದರು.
ಉಪ ಪೊಲೀಸ್ ಅಧೀಕ್ಷಕ DySP ವಿಜಯಪ್ರಸಾದ್ ಮಾತನಾಡಿ, ಒಮ್ಮೆ ಡ್ರಗ್ಸ್ ಚಟಕ್ಕೆ ಬಲಿಯಾದರೆ ಹೊರಬರುವುದು ಕಷ್ಟ. ಹಾಗಾಗಿ ಇಂತಹ ದುಶ್ಚಟಗಳನ್ನು ರೂಢಿಸಿಕೊಳ್ಳದೆ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬದುಕಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೆ ಬದುಕಿನಲ್ಲಿ ನಿರ್ದಿಷ್ಟ ಗುರಿ ಹೊಂದಿ ಕನಸುಗಳನ್ನು ಈಡೇರಿಸಿಕೊಂಡು ಪ್ರಜ್ಞಾವಂತ ಪ್ರಜೆಗಳಾಗಿ ಬದುಕಬೇಕು ಎಂದರು.

ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 58ನೇ ಪಟ್ಟಾಭಿಷೇಕದ ದಿನದ ಅಂಗವಾಗಿ ನಡೆಯುತ್ತಿದೆ. ಹೆಗ್ಗಡೆ ಅವರ ನೇತೃತ್ವದಲ್ಲಿ ಹಲವು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.
ಕಾರ್ಯಕ್ರಮಕ್ಕೆ ಮೊದಲು, ‘ನಶೆಯೆಂಬ ನರಕ’ ಕಿರುಚಿತ್ರ ಪ್ರದರ್ಶಿಸಲಾಯಿತು. ಮಾದಕವ್ಯಸನದಿಂದ ದೂರವಿದ್ದು, ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸುವ ಕುರಿತು ವಿದ್ಯಾರ್ಥಿಗಳಿಗೆ ಅನಿಲ್ ಕುಮಾರ್ ಭೂಮರೆಡ್ಡಿ ಪ್ರಮಾಣವಚನ ಬೋಧಿಸಿದರು.

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ಕಾಲೇಜಿನಿಂದ ಆಗಮಿಸಿದ್ದ ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅಡಿಷನಲ್ ಎಸ್ಪಿ ಉತ್ತರಿಸಿದರು.
ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳು, ಎನ್ನೆಸ್ಸೆಸ್ ಸ್ವಯಂಸೇವಕರು, ಉಪನ್ಯಾಸಕರು, ಜಿಲ್ಲೆಯ ವಿವಿಧ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಮಾಲಿನಿ ಅಂಚನ್ ವಂದಿಸಿದರು. ಮಾನ್ಯ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು.
