ಬೆಂಗಳೂರು (ಅ.17) : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಕ್ಟೋಬರ್ 21 ಮತ್ತು 22 ರಂದು ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಿದೆ.

ಮಂಡಳಿಯು ಎಲ್ಲಾ ಜಿಲ್ಲಾಡಳಿತಗಳಿಗೆ ‘ಹಸಿರು ರಹಿತ’ (non-green) ಪಟಾಕಿಗಳ ಅಕ್ರಮ ಸಂಗ್ರಹಣೆ, ಮಾರಾಟ ಮತ್ತು ವಹಿವಾಟಿನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ಕೇವಲ ಹಸಿರು (ಗ್ರೀನ್) ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದೆ.

ಈ ನಿರ್ಧಾರವು ದೆಹಲಿ-ಎನ್‌ಸಿಆರ್‌ನಲ್ಲಿ ಪಟಾಕಿ ಬಳಕೆಯನ್ನು ನಿಯಂತ್ರಿಸುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನದ ಹಿನ್ನೆಲೆಯಲ್ಲಿ ಬಂದಿದೆ. ಕರ್ನಾಟಕವು 2018 ರಿಂದಲೇ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುತ್ತಿದ್ದು, ಪರಿಸರ ಸ್ನೇಹಿ ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದೆ.

ಭಾರೀ ಲೋಹದ ಆಕ್ಸೈಡ್‌ಗಳು ಅಥವಾ ಇತರ ಮಾಲಿನ್ಯಕಾರಕಗಳನ್ನು ಹೊಂದಿರುವ ಪಟಾಕಿಗಳನ್ನು ಮಾರಾಟ ಮಾಡುವ ಅಥವಾ ದಾಸ್ತಾನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪ್ರಾದೇಶಿಕ ಅಧಿಕಾರಿಗಳು, ಉಪ ಆಯುಕ್ತರು (ಡಿಸಿಗಳು) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿಗಳು) ಸೂಚಿಸಲಾಗಿದೆ.

KSPCB ಅಧ್ಯಕ್ಷ ಪಿಎಂ ನರೇಂದ್ರ ಸ್ವಾಮಿ ಅವರು, ಮಂಡಳಿಯು ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶವನ್ನು ಪರಿಶೀಲಿಸುತ್ತಿದೆ ಮತ್ತು ಬೆಂಗಳೂರಿನ ವಾಯು ಮಾಲಿನ್ಯದ ಮಟ್ಟವು ದೆಹಲಿಗೆ ಹೋಲಿಸಿದರೆ ಕಡಿಮೆ ಇರುವುದರಿಂದ ನಾಗರಿಕರಿಗೆ ನಿಗದಿತ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಲು ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಆಚರಣೆಗಳ ಸಂದರ್ಭದಲ್ಲಿಯೂ ಇದೇ ರೀತಿಯ ಎರಡು ಗಂಟೆಗಳ ನಿರ್ಬಂಧ ಜಾರಿಯಲ್ಲಿತ್ತು.
