ಉಜಿರೆ, (ಅ.18): ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಸರಸ್ವತಿ ಪೂಜೆ, ಲಕ್ಷ್ಮೀ ಪೂಜೆ, ಬಲೀಂದ್ರ ಪೂಜೆ, ಗೋಪೂಜೆ ನಡೆಯಿತು. ಕೃಷಿ ಸಲಕರಣೆಗಳು ಹಾಗೂ ಗ್ರಂಥಗಳನ್ನು ಪೂಜಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ. ಎಸ್ ಅವರು ವಿದ್ಯಾರ್ಥಿಗಳನ್ನು
ಉದ್ದೇಶಿಸಿ ದೀಪಾವಳಿಯ ಹಿನ್ನೆಲೆಯನ್ನು ವಿವರಿಸಿದರು. ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಎಂಬ ಶ್ಲೋಕ ಮಾನವನ ಬದುಕಿನ ಆಧ್ಯಾತ್ಮಿಕ ದೀಪಗಳಂತೆ, ಸತ್ಯ ಮತ್ತು ಬೆಳಕಿನತ್ತ ಮುನ್ನಡೆಸುವ ಸಂದೇಶವನ್ನು ಸಾರುತ್ತದೆ. ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ಜೀವನ ಮತ್ತು ಜೀವದ ಸಂಕೇತವಾಗಿದೆ ಎಂದರು.

ದೀಪಾವಳಿ ಕೇವಲ ಹಬ್ಬವಲ್ಲ, ಅದು ಅಂಧಕಾರದ ಮೇಲೆ ಬೆಳಕಿನ, ದುಷ್ಟತೆಯ ಮೇಲೆ ಸತ್ಪ್ರವೃತ್ತಿಯ ಜಯದ ಸಂಕೇತ. ಶತಮಾನಗಳಿಂದ ಆಚರಿಸಲಾಗುತ್ತಿರುವ ಈ ಹಬ್ಬ ಜೀವನದಲ್ಲಿ ಹೊಸತನ, ಚೈತನ್ಯ ಮತ್ತು ನೆಮ್ಮದಿಯ ಬೆಳಕನ್ನು ತುಂಬುತ್ತದೆ. ಕರಾವಳಿ ಭಾಗದ ಪಾರಂಪರಿಕ ಜೀವನ ಶೈಲಿಯ ನೆನಪಿನಲ್ಲಿ, ದೀಪಾವಳಿಯ ಪೌರಾಣಿಕ ಹಾಗೂ ಸಾಂಸ್ಕೃತಿಕ ಅರ್ಥವನ್ನು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು, ಕೇವಲ ಮನೆಗಳಲ್ಲಿ ಸಮುದಾಯಗಳಲ್ಲಿ ಆಚರಿಸಲಾಗುತ್ತಿದ್ದ ಹಬ್ಬ ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸುವುದು ಖುಷಿಯ ವಿಚಾರ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ದೀಪಾವಳಿ ಹಬ್ಬವು ಕೇವಲ ಭಾರತದಲ್ಲೇ ಅಲ್ಲ, ವಿಶ್ವದಾದ್ಯಂತ ಸಂತೋಷದಿಂದ ಆಚರಿಸಲಾಗುತ್ತಿರುವ ಹಬ್ಬ. ದೀಪಾವಳಿಯ ಆಚರಣೆಯು ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ೧೪ ವರ್ಷ ವನವಾಸದ ನಂತರ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿದ ಸಂದರ್ಭವನ್ನು
ಸ್ಮರಿಸುವ ಹಬ್ಬ. ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿಸಿ ಅವರ ಆಗಮನವನ್ನು ಸ್ವಾಗತಿಸಿದ ಪರಂಪರೆಯಿಂದಲೇ ಈ ಹಬ್ಬಕ್ಕೆ “ದೀಪಾವಳಿ”
ಎಂಬ ಹೆಸರು ಬಂದಿದೆ ಎಂದರು ತಿಳಿಸಿದರು. ದೀಪಾವಳಿ ಹಬ್ಬ ಜೀವನದಲ್ಲಿ ಬೆಳಕು, ಸತ್ಯ ಮತ್ತು ಧನಾತ್ಮಕ ಚಿಂತನೆಯ ಸಂದೇಶವನ್ನು ಸಾರುತ್ತದೆ. ಪ್ರತಿಯೊಬ್ಬರು ಋಣಾತ್ಮಕವಾಗಿ ಯೋಚಿಸದೆ ಧನಾತ್ಮಕವಾಗಿ ಯೋಚಿಸಬೇಕು ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಸ್ವಚ್ಛತಾ ಹಾಗೂ ಭದ್ರತಾ ಸಿಬ್ಬಂದಿಗಳಿಗೆ
ಉಡುಗೊರೆ ನೀಡಲಾಯಿತು.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ನಿವೃತ್ತ
ಮುಖ್ಯಸ್ಥ ಪ್ರೊ. ಬಿ ಶಿವರಾಮ ಹೊಳ್ಳ ಉಪಸ್ಥಿತರಿದ್ದರು. ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ ಸೌಮ್ಯ ಬಿ ಪಿ ಸ್ವಾಗತಿಸಿದರು.
ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಹಾಗೂ ಕಾರ್ಯಕ್ರಮದ ಸಂಯೋಜಕಿ ಡಾ. ಧನೇಶ್ವರಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ
ವಿದ್ಯಾರ್ಥಿನಿಯರಾದ ತೇಜಸ್ವಿನಿ ಮತ್ತು ಸುಧೀಕ್ಷಾ ಜೈನ್ ನಿರೂಪಿಸಿದರು. ಧರ್ಮಸ್ಥಳದ ಕ್ಲಾಸಿಕ್ ಟೈಗರ್ಸ್ ತಂಡದಿಂದ ಪಾರಂಪರಿಕ ‘ಪಿಲಿನಲಿಕೆ’
ನಡೆಯಿತು. ಹುಲಿ ವೇಷಧಾರಿಗಳು ನರ್ತನದೊಂದಿಗೆ ವಿವಿಧ ಸಾಹಸ ಪ್ರದರ್ಶನ ನೀಡಿದರು. ಎಸ್ ಡಿ ಎಂ ಕಲಾಕೇಂದ್ರದ ವಿದ್ಯಾರ್ಥಿಗಳ ಚೆಂಡೆ ವಾದನ
ಹಾಗೂ ಕಾಲೇಜಿನ ವಿದ್ಯಾರ್ಥಿಗಳ ನೃತ್ಯ ಕರ‍್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು. ವಿದ್ಯಾರ್ಥಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗ ಹಾಗೂ ಬಿವೋಕ್ ವಿಭಾಗದ ಬೋಧಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು
ಹಾಗೂ ಅಹ್ವಾನಿತರು ಉಪಸ್ಥಿತರಿದ್ದರು.

