ಬೆಂಗಳೂರು(ಅ. 28) : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ ಎಂಬುದು ಕೇಳಿಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’ ಎಂದು ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: 🔴ಕ್ರಿಕೆಟರ್ ಶ್ರೇಯಸ್ ಅಯ್ಯರ್ ICUದಿಂದ ವಾರ್ಡ್‌ಗೆ ಶಿಫ್ಟ್
ಆರ್ ಅಶೋಕ್ ಟ್ವೀಟ್ನಲ್ಲೇನಿದೆ?
ಪಾಲಿಕೆ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಶಿಕ್ಷಕರ ವ್ಯವಸ್ಥೆ ಮಾಡುತ್ತೇವೆಂದೂ, ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ನಿಗದಿತ ವೇತನ ನೀಡುತ್ತೇವೆಂದೂ ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದರು. ಈ ಭರವಸೆಗಳು ಕಾರ್ಯರೂಪಕ್ಕೆ ಬರದ ಕಾರಣ ಟ್ವೀಟ್ ಮಾಡಿರುವ ಆರ್ ಅಶೋಕ್, ‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ.

ಸುರಂಗ ರಸ್ತೆ ಮಾಡುತ್ತೇನೆ, ಸ್ಕೈ ಡೆಕ್ ಮಾಡುತ್ತೇನೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ, ಜಿಬಿಎ ಮಾಡುತ್ತೇನೆ ಎಂದು ಬರೀ ಓಳು ಬಿಟ್ಟು ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ್ಮ ಸಾಧನೆ. ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷಕರ ಸಮಸ್ಯೆ ಬಗೆಹರಿಸಿ.’ ಎಂದು ಡಿಕೆ ಶಿವಕುಮಾರನ್ನು ಟ್ಯಾಗ್ ಮಾಡಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.




