ಬೆಂಗಳೂರು(ಅ.29): ಯುವಕನೊಬ್ಬ ಚಪ್ಪಲಿ ಕಾಲಿನಲ್ಲಿ ದೇವಸ್ಥಾನದ ಒಳಗೆ ನುಗ್ಗಿ ದೇವರ ವಿಗ್ರಹಕ್ಕೆ ಒದ್ದು, ಎಳೆದಾಡಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ದೇವರ ಬೀಸನಹಳ್ಳಿಯಲ್ಲಿಯೇ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ವಿಶೇಷ ಚೇತನ ಕಬೀರ್ ಎಂಬಾತ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆತನನ್ನು ಸ್ಥಳೀಯರು ಹಿಡಿದು ಕಟ್ಟಿಹಾಕಿ ಥಳಿಸಿದ್ದಾರೆ. ಸ್ಥಳೀಯರು ವಿಚಾರಣೆ ನಡೆಸಿದಾಗ ಆತ, ಬಾಂಗ್ಲಾದೇಶದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಅನುಮತಿಯಿಲ್ಲದೆ ಗುಂಪು ಸೇರಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ ಆರೋಪ
ಬೆಳಗ್ಗೆ 8.30 ಸುಮಾರಿಗೆ ಇಸ್ಲಾಂ ಧರ್ಮದ ಪರ ಘೋಷಣೆ ಕೂಗುತ್ತಾ ಬಂದಿದ್ದ ಆರೋಪಿ, ದೇಗುಲದ ಬಳಿ ಇದ್ದ ಮೆಡಿಕಲ್ ಅಂಗಡಿ ಮುಂದೆ ಹಾಕಿದ್ದ ಗಣಪತಿ ದೇವರ ಫೋಟೊಗೆ ಸ್ಟಿಕ್ನಿಂದ ಹೊಡೆದಿದ್ದ. ಅದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು ಅಲ್ಲಿಂದ ಸೀದಾ ಹತ್ತಿರದಲ್ಲೇ ಇದ್ದ ದೇವಸ್ಥಾನದತ್ತ ಓಡಿದ್ದ. ದೇವಸ್ಥಾನ ಬಳಿ ಕೂಗಾಡಿ ಕಲ್ಲಿನಿಂದ ಗರಡುಗಂಬಕ್ಕೆ ಹೊಡೆದಿದ್ದ. ಕೈನಲ್ಲಿ ಆಯಿಲ್ ಮಾದರಿ ವಸ್ತುವನ್ನು ಹಿಡಿದು ಬಂದಿದ್ದ. ಬಳಿಕ ಚಪ್ಪಲಿ ಕಾಲಲ್ಲಿ ಗರ್ಭಗುಡಿಗೆ ನುಗ್ಗಿದ್ದಾನೆ. ದೇವರ ಮೂರ್ತಿ ಎಳೆದಾಡಿ ಚಪ್ಪಲಿ ಕಾಲಲ್ಲಿ ಒದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಬೀರ್ನ ವಿಕೃತಿಯನ್ನು ಕಂಡು ದೇವಸ್ಥಾನ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಜಮಾಯಿಸಿದ ಸ್ಥಳೀಯರು ಆತನನ್ನು ಎಳೆದು ತಂದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಆರೋಪಿಯನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬಳಿ ಇದ್ದ ಆಯಿಲ್ ಬಾಟಲಿ, ಚಪ್ಪಲಿ, ಕಲ್ಲು ವಶಕ್ಕೆ ಪಡೆಯಲಾಗಿದೆ. ಆತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.




