ಉಜಿರೆ(ಅ.29) : ಆಳವಾದ ಓದಿನಿಂದ ಕಥೆಗಳ ಅಭಿವ್ಯಕ್ತಿಗೆ ಸೃಜನಶೀಲ ಆಯಾಮ ದೊರಕುತ್ತದೆ ಎಂದು ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನ ರೇಡಿಯೋ ಸಾರಂಗದ ಆರ್‌ಜೆ ಅಭಿಷೇಕ್ ಶೆಟ್ಟಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸೋಮವಾರ ಆಯೋಜಿಸಿದ ಯುವಕಥೆಗಾರರ ಕಥನ ಪ್ರಸ್ತುತಿಯ ಕಾರ್ಯಕ್ರಮದ ನಾಲ್ಕನೇ ಸಂಚಿಕೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಇದನ್ನೂ ಓದಿ: 🔴ಉಜಿರೆ: ತಾಲೂಕು ಮಟ್ಟದ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಎಸ್.ಡಿ.ಎಂ ಪ.ಪೂ.ಕಾಲೇಜಿನ
ಎಲ್ಲರೊಳಗೊಬ್ಬ ಕಥೆಗಾರ ಇರುತ್ತಾನೆ. ಆತನ ಅಭಿವ್ಯಕ್ತಿ ಸೃಜನಶೀಲವಾಗಬೇಕಾದರೆ ಕಥನ ಪರಂಪರೆಯ ಶ್ರೇಷ್ಠ ಕಥೆಗಳನ್ನು ಓದಿಕೊಳ್ಳಬೇಕು. ಆ ಓದಿನಿಂದ ಕಥೆಕಟ್ಟುವ ಸೃಜನಶೀಲತೆ ಸಿದ್ಧಿಸುತ್ತದೆ. ಕಥೆಯನ್ನು ಓದುವ ಮತ್ತು ಓದಿದ ಕಥೆಯನ್ನು ಕೇಳುವವರ ಮನಸ್ಸಿಗೆ ಹತ್ತಿರವಾಗುವಂತಹ ಕಥನಗಳ ಸೃಷ್ಟಿ ಸಾಧ್ಯವಾಗುತ್ತದೆ ಎಂದರು. ಕಥಾ ಮಾಧ್ಯಮವೆಂದರೆ ಅದೊಂದು ಸಂವಹನ ಮಾಧ್ಯಮವಿದ್ದಂತೆ, ಕಥೆಗಳಿಂದ ನಮ್ಮ ಆಲೋಚನೆ, ಅಭಿರುಚಿ, ಅಭಿಪ್ರಾಯಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ ಮಾತನಾಡಿದರು. ದೇಶದ ಶ್ರೇಷ್ಠ ಪರಂಪರೆಯ ಮೌಲ್ಯಗಳು ಕಥೆಗಳ ಮುಖಾಂತರ ದಾಟುತ್ತವೆ. ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಕಾಲೇಜು ವಿವಿಧ ರೀತಿಯ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ರಚನಾತ್ಮಕ ಕೌಶಲ್ಯಗಳ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ,
ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸ್ಪೀಕ್ಸ್ ವೇದಿಕೆಯಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿ ಕೌಶಿಕ್.ಕೆ ತಾಯಿಯೇ ತಂದೆಯಾಗಿ ಕೌಟುಂಬಿಕ ಹೊಣೆ ನಿಭಾಯಿಸುವ ವೈಶಿಷ್ಠ್ಯಯತೆಯ ಕಥೆಯನ್ನು ಪ್ರಸ್ತುತಪಡಿಸಿದರು. ಪತ್ರಿಕೋದ್ಯಮ ಪದವಿ ವಿಭಾಗದ ವಿದ್ಯಾರ್ಥಿನಿ ಶ್ರೇಯಾ ಮಿಂಚಿನಡ್ಕ ವಿವಾಹದ ಹೊಸಿಲಲ್ಲಿರುವಾಗ ಯುವತಿ ತನ್ನ ಸಹೋದರನ ಬದುಕಿನ ಕುರಿತು ಹೇಳಿಕೊಳ್ಳುವ ನಿವೇದನೆ ಕಾಣಿಸಿದರು. ಸ್ನಾತಕೋತ್ತರ
ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ವೈಷ್ಣವಿ ಪಿ.ಯು ರೈತರ ತಳಮಳಗಳನ್ನು ಹಿಡಿದಿಡುವ ಕಥನ-ಕವನದೊಂದಿಗೆ ಗಮನ ಸೆಳೆದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಪ್ರತಿನಿಧಿ ಅರ್ಚಿತ್.ಜೈನ್.ಸಂಸೆ ಕನಸಿನ ಅಪ್ಸರೆಯ ಕಥೆ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಡೀನ್ ಸೌಮ್ಯ ಬಿ.ಪಿ, ಆಡಳಿತಾಂಗ ಕುಲಸಚಿವ ಪ್ರೊ.ಶ್ರೀಧರ ಎನ್ ಭಟ್ಟ, ಪರೀಕ್ಷಾಂಗ ಕುಲಸಚಿವ ಬಿ.ಗಣೇಶ್ ನಾಯಕ್, ಸ್ಪೀಕ್ಸ್ ಕಾರ್ಯಕ್ರಮದ ಸಂಯೋಜಕಿ, ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ಎ.ಜೆ ಉಪಸ್ಥಿತರಿದ್ದರು. ದ್ವಿತೀಯ ಪತ್ರಿಕೋದ್ಯಮದ ಅರ್ಚನಾ ನಿರೂಪಿಸಿ, ಮೇಘಾ ಗಲಗಲಿ ವಂದಿಸಿದರು.



