ಬೆಳ್ತಂಗಡಿ :(ಅ.30) ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಹೆಸರು ಕೆಡಿಸುವ ನೂರಾರು ಶವ ಹೂತಿಟ್ಟ ಹುನ್ನಾರ ತಮ್ಮ ಪಾಲಿಗೆ ಉರುಳಾಗುತ್ತಿದ್ದಂತೆ ಯೂ ಟರ್ನ್ ಹೊಡೆದಿರುವ ‘ಬುರುಡೆ ಗ್ಯಾಂಗ್’, ಇದೀಗ ದೂರುದಾರ ಚಿನ್ನಯ್ಯ ಹೇಳಿಕೆ ಮೇರೆಗೆ ದಾಖಲಾಗಿದ್ದ ಮೂಲ ಪ್ರಕರಣವನ್ನೇ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ.

ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ ಈ ನಾಲ್ಕು ಜನರಿಂದ ಸೆ.27 ರಂದು ಹೈಕೋರ್ಟ್ ನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 39/25 ಪ್ರಕರಣದಲ್ಲಿ SIT ತನಿಖೆ ನಡೆಸುತ್ತಿರುವ ‘ಹಲವಾರು ಶವ ಹೂತು ಹಾಕಿದ ಪ್ರಕರಣ’ ಮತ್ತು ಎಸ್.ಐ.ಟಿ ವಿಚಾರಣೆಗೆ ಹಾಜರಾಗುವಂತೆ ಅ.24 ರಂದು ನೀಡಿದ ನೋಟಿಸ್ ರದ್ದು ಪಡಿಸುವಂತೆ ಹೈ ಕೋರ್ಟ್ ವಕೀಲ ಬಾಲನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ನಾಲ್ಕು ಸೂತ್ರಧಾರಿಗಳಿಗೆ ಬೆಳ್ತಂಗಡಿ ಎಸ್‌ಐಟಿ ವಿಚಾರಣೆಗೆ ಅ.27 ರಂದು ಹಾಜರಾಗುವಂತೆ ಅ.24 ರಂದು ನೋಟಿಸ್ ಜಾರಿ ಮಾಡಿದ್ದ ಬೆನ್ನಲ್ಲೇ ಹೈಕೋರ್ಟ್ ಮೊರೆ ಹೋಗಿ ಬೆಳ್ತಂಗಡಿ ಎಸ್‌ಐಟಿ ತನಿಖೆಗೆ ಅ.27 ರಂದು ಹಾಜರಾಗದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಕೀಲರನ್ನು ಎಸ್‌ಐಟಿ ಕಚೇರಿಗೆ ಕಳುಹಿಸಿ ಒಂದು ವಾರದ ಸಮಯಾವಕಾಶವನ್ನು ಕೇಳಿಕೊಂಡಿದ್ದರು.
ಸುಳ್ಳು ಆರೋಪಗಳನ್ನು ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಬುರುಡೆ ಸೂತ್ರಧಾರಿಗಳ ಟೀಂ ಇದೀಗ ತಾವೇ ತೋಡಿದ ಗುಂಡಿಗೆ ಬೀಳುವ ಸಮಯದ ನಡುವೆ ಕೊನೆಯ ಅಸ್ತ್ರವಾಗಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸುವ ಮೂಲಕ ಈ ನಾಲ್ಕು ಮಂದಿ ಸೂತ್ರಧಾರಿಗಳ ಒಂದೊಂದೆ ಷಡ್ಯಂತ್ರಗಳು ಬಯಲಾಗುತ್ತಿದೆ.




