ಕಡಬ:(ನ.2) ಇಲ್ಲಿನ ಸಂತೆಕಟ್ಟೆ ಬಳಿ ಇರುವ ಹಸಿಮೀನು ಮಾರುಕಟ್ಟೆಯ ಪ್ರಾಂಗಣದಲ್ಲಿ ಕಡಿಮೆ ದರ ಮೀನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದ ಘಟನೆಗೆ ಐವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ⭕ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ
ನ.1 ರಂದು ಮುಂಜಾನೆ ಇತ್ತಂಡಗಳು ಹೊಡೆದಾಟ ಮಾಡಿಕೊಳ್ಳುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಡಬ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಅಭಿನಂದನ ಎಮ್ ಎಸ್ ರವರು ವಿಡಿಯೋವನ್ನು ಪರಿಶೀಲಿಸಿದಾಗ ಮೀನು ಮಾರಾಟದ ವಿಚಾರಕ್ಕೆ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬವರ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆದಿರುವುದು ಕಂಡು ಬಂದಿದೆ.

ರಾಜು ಮ್ಯಾಥ್ಯೂ, ಆದಂ ,ಫಯಾಜ್ ,ರಕ್ಷಿತ್ ಮಾಣಿ, ನೌಫಾಲ್ ಎಂಬುವರುಗಳು ಪರಸ್ಪರ ಹೊಡೆದಾಟ ಮಾಡಿಕೊಂಡಿರುವುದು ತಿಳಿದುಬಂದಿರುತ್ತದೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವಂತೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿಭಂಗ ಉಂಟಾಗುವಂತೆ ಮಾಡಿದ ಸದ್ರಿ ವ್ಯಕ್ತಿಗಳ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025. ಕಲಂ: 194 (2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




