ಬೆಳ್ತಂಗಡಿ: ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳಿಗೆ ಕನ್ನಡಿ ಹಾವೊಂದು ಕಡಿದ ಘಟನೆ ನ.2ರಂದು ತಣ್ಣೀರುಪಂತ ಸಮೀಪದ ಕುದ್ರಡ್ಕದಲ್ಲಿ ಸಂಭವಿಸಿದೆ. ನಾಟಿವೈದ್ಯರೊಬ್ಬರ ಸಕಾಲಿಕ ನೆರವಿನಿಂದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುದ್ರಡ್ಕ ನಿವಾಸಿ ವಿಜಯ ಮಡೆಕ್ಕಿಲ ಅವರ ಮಗ ದಕ್ಷಿತ್ ಮತ್ತು ಅಕ್ಕನ ಮಕ್ಕಳಾದ ವಿಶ್ಮಿತಾ ಹಾಗೂ ಅನ್ವಿತಾ ಒಂದೇ ಕೋಣೆಯಲ್ಲಿ ಮಲಗಿದ್ದು, ರಾತ್ರಿ 11.30ರ ಸುಮಾರಿಗೆ ಕೋಣೆಯೊಳಗೆ ಪ್ರವೇಶಿಸಿದ ವಿಷಪೂರಿತ ಕನ್ನಡಿ ಹಾವು ದಕ್ಷಿತ್ ನ ಎರಡೂ ಕೈಗಳಿಗೆ ಕಚ್ಚಿತು. ಬಳಿಕ ವಿಶ್ಮಿತಾ ಹಾಗೂ ಅನ್ವಿತಾ ಅವರ ಕೈಗೂ ಕಚ್ಚಿದ್ದು ಮಕ್ಕಳು ಭೀತಿಯಿಂದ ಕಂಗೆಟ್ಟಿದ್ದರು.
ಮಕ್ಕಳನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಅನಿವಾರ್ಯ ಇದ್ದರೂ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ದುಃ ಸ್ಥಿತಿಯಿಂದಾಗಿ ಆಸ್ಪತ್ರೆ ತಲುಪುವುದು ವಿಳಂಬವಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಇರುವುದರಿಂದ ಕಂಗೆಟ್ಟ ಮನೆಯವರು ತಣ್ಣೀರುಪಂತ ಗ್ರಾಮದಲ್ಲಿನ ನಾಟಿ ವೈದ್ಯ ಸೂರಪ್ಪ ಪೂಜಾರಿ ಅವರ ಮನಗೆ ಹೋದರು. ಮಧ್ಯರಾತ್ರಿ ಹಾವು ಕಡಿತಕ್ಕೊಳಗಾಗಿ ಮನೆಗೆ ಬಂದ ಮೂವರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಾಟಿವೈದ್ಯ ಸೂರಪ್ಪ ಪೂಜಾರಿ ಅವರು ತಾವು ಪರಂಪರಾಗತವಾಗಿ ಅರಿತುಕೊಂಡಿರುವ ಔಷಧವನ್ನು ಮಕ್ಕಳಿಗೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ.





