ಮಂಗಳೂರು: ಮಂಗಳೂರಿನ ರೌಡಿಶೀಟರ್ ನೌಫಾಲ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅಸಲಿ ವಿಚಾರ ಗೊತ್ತಾಗಿದೆ. ನೌಫಾಲ್ ಯಾನೆ ಟೋಪಿ ನೌಫಾಲ್ ರೈಲು ಡಿಕ್ಕಿಯಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ ಆತನ ಸಾವಿನ ಕುರಿತಂತೆ ಹಲವು ಸಂಶಯಗಳು ಇದ್ದು ಇಡೀ ಪ್ರಕರಣ ನಿಗೂಢವಾಗಿದೆ.

ಇದನ್ನೂ ಓದಿ: ⭕ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದು ಶಿಕ್ಷಕ?
ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೆ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಲಭಿಸಿತ್ತು. ನೌಫಾಲ್ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದುದರಿಂದ ಯಾರೋ ಮಾತುಕತೆಗೆ ಕರೆದು ಕೊಲೆ ಮಾಡಿದ್ದಾರೆಂದು ಮಾಹಿತಿ ಲಭಿಸಿತ್ತು. ಕುತ್ತಿಗೆ, ತಲೆಯಲ್ಲಿ ರಕ್ತ ಜಿನುಗಿದ್ದು ಹೊಡೆದು ಹಾಕಿದ ರೀತಿಯ ಕಲೆಗಳಿದ್ದುದರಿಂದ ಯಾರೋ ಹತ್ಯೆ ಮಾಡಿದ್ದಿರಬಹುದೆಂಬ ಶಂಕೆಗಳಿದ್ದವು. ಆದರೆ ಕಾಸರಗೋಡು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ತಲವಾರಿನಿಂದ ಕಡಿದು ಆಗಿರುವ ಗಾಯಗಳಲ್ಲ. ಬದಲಿಗೆ ರೈಲು ಡಿಕ್ಕಿ ಹೊಡೆದು ಆಗಿರುವ ಗಾಯಗಳೆಂದು ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಮಂಜೇಶ್ವರ ಪೊಲೀಸರು ನೌಫಾಲ್ ಸಾವು ಕೊಲೆಯಾಗಿದೆ ಎಂದು ನಂಬುವ ಯಾವುದೇ ಪುರಾವೆಗಳು ಇಲ್ಲಿಯ ತನಕ ದೊರೆತಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿವೆ. ಮಂಗಳೂರಿನ ಬಜಾಲಿನಿಂದ ಉಪ್ಪಳಕ್ಕೆ ಸ್ಕೂಟರಿನಲ್ಲೇ ನೌಫಾಲ್ ತೆರಳಿದ್ದ ಎನ್ನಲಾಗುತ್ತಿದೆ. ನೌಫಾಲ್ ನಿಜಕ್ಕೂ ರೈಲು ಹೊಡೆದು ಸತ್ತನೇ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.






