ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದ ಏಕರೂಪ ಟಿಕೆಟ್ ದರವನ್ನು (200 ರೂಪಾಯಿ+36 ರೂಪಾಯಿ ಜಿಎಸ್ಟಿ) ಮಲ್ಟಿಫ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಈ ವೇಳೆ ಕರ್ನಾಟಕ ಹೈಕೋರ್ಟ್ ಮಲ್ಟಿಪ್ಲೆಕ್ಸ್ ಪರವಾಗಿ ತೀರ್ಪನ್ನು ನೀಡಿತ್ತು. ಅಷ್ಟೇ ಅಲ್ಲ, ಮಾರಾಟವಾದ ಪ್ರತಿ ಟಿಕೆಟ್ ದರದ ವಿವರವನ್ನು ಇಟ್ಟುಕೊಳ್ಳುವಂತೆ ಮಲ್ಟಿಪ್ಲೆಕ್ಸ್ಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಟಿಕೆಟ್ ವಿವರ ಇಟ್ಟುಕೊಳ್ಳಬೇಕು ಎಂಬ ಆದೇಶವನ್ನು ಮಲ್ಟಿಪ್ಲೆಕ್ಸ್ಗಳು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಈ ವೇಳೆ ಮಲ್ಟಿಪ್ಲೆಕ್ಸ್ಗಳ ಪರವಾಗಿ ತೀರ್ಪು ಬಂದಿದೆ. ಈ ವೇಳೆ ತಲೆನೋವು ಕೂಡ ಶುರುವಾಗಿದೆ.

ಇದನ್ನೂ ಓದಿ: ⭕Bigg Boss: ಗಿಲ್ಲಿ ಮೇಲೆ ಹಲ್ಲೆ ಮಾಡಿದ ರಿಷಾ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರನ್ನು ಒಳಗೊಂಡ ಪೀಠವು ಈ ಬಗ್ಗೆ ಆದೇಶ ನೀಡಿದೆ. ಮಲ್ಟಿಪ್ಲೆಕ್ಸ್ ಪರವಾಗಿ ಕೋರ್ಟ್ಗೆ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ ತಮ್ಮ ವಾದ ಮುಂದಿಟ್ಟರು. ‘ಸಿನಿಮಾ ಟಿಕೆಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬುಕ್‌ಮೈಶೋನಂತಹ ಆನ್‌ಲೈನ್ ಆ್ಯಪ್ಗಳ ಮೂಲಕ ಮಾರಾಟ ಆಗುತ್ತಿವೆ. ಈ ರೀತಿ ಬುಕ್ ಮಾಡುವಾಗ ಅವರ ಖಾತೆಗಳನ್ನು ಮತ್ತು ಖರೀದಿದಾರರ ಗುರುತನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಗ್ರಾಹಕರ ವಿವರ ಅವರ ಬಳಿ ಇರುತ್ತವೆ. ನಾವು ಯಾವುದೇ ವಿವರಗಳು ಅಥವಾ ಐಡಿಗಳ ವಿವರ ಇಟ್ಟುಕೊಳ್ಳುವುದಿಲ್ಲ. ಟಿಕೆಟ್ ಖರೀದಿಸಲು ಯಾರೂ ಈಗ ಕೌಂಟರ್‌ಗೆ ಹೋಗುವುದಿಲ್ಲ’ ಎಂದು ರೋಹಟ್ಗಿ ನ್ಯಾಯಮೂರ್ತಿಗಳ ಎದುರು ಹೇಳಿದರು.
ಟಿಕೆಟ್ ಖರೀದಿದಾರರ ವಿವರ ಇಟ್ಟುಕೊಳ್ಳಬೇಕು ಎಂಬ ಆದೇಶ ಅಸಾಧ್ಯ ಎಂದು ಮುಕುಲ್ ಹೇಳಿದರು. ‘ಹೈಕೋರ್ಟ್‌ನ ನಿರ್ದೇಶನಗಳು ಕಾರ್ಯಸಾಧ್ಯವಲ್ಲ. ಟಿಕೆಟ್ ಖರೀದಿಸಲು ಯಾರು ಗುರುತಿನ ಚೀಟಿಯನ್ನು ಒಯ್ಯುತ್ತಾರೆ? ನಗದು ನೀಡಿ ಖರೀದಿಸಿದ ಪ್ರತಿ ಟಿಕೆಟ್‌ಗೆ ಗುರುತಿನ ಚೀಟಿ ವಿವರಗಳನ್ನು ಇಟ್ಟುಕೊಳ್ಳಿ ಎಂದು ಹೈಕೋರ್ಟ್ ಹೇಳುತ್ತದೆ’ ಎಂದು ರೋಹಟ್ಗಿ ವಾದಿಸಿದರು. ಹೀಗಾಗಿ ಮಲ್ಟಿಪ್ಲೆಕ್ಸ್ ಪರವಾಗಿ ತೀರ್ಪು ಬಂದಿದೆ.

ಸರ್ಕಾರಿ ಪರ ವಕೀಲರ ವಾದ
ಇದಕ್ಕೆ ಉತ್ತರಿಸಿದ ಸರ್ಕಾರಿ ಪರ ವಕೀಲರು, ‘ಸದ್ಯ ಕರ್ನಾಟಕ ಹೈಕೋರ್ಟ್ ನೀಡಿರೋದು ಮಧ್ಯಂತರ ಆದೇಶ ಮಾತ್ರ. ಒಂದೊಮ್ಮೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಗೆದ್ದರೆ 1000 ರೂಪಾಯಿ ಟಿಕೆಟ್ ದರ ವಿಧಿಸಿದ್ದರೆ ಇದರಲ್ಲಿ 800 ರೂಪಾಯಿ ಹಣವನ್ನು ಗ್ರಾಹಕರಿಗೆ ಮರಳಿ ನೀಡಬೇಕು. ಇದನ್ನು ಕರ್ನಾಟಕ ಹೈಕೋರ್ಟ್ ಆದೇಶಿಸಿರುವುದು’ ಎಂದು ವಿವರಿಸಿದರು.
ಟಿಕೆಟ್ ದರದ ಬಗ್ಗೆ ಸುಪ್ರೀಂ ಅಭಿಪ್ರಾಯ..
ವಿಕ್ರಮ್ ನಾಥ್ ಅವರು ಟಿಕೆಟ್ ಬೆಲೆ ಬಗ್ಗೆ ಅಸಮಾಧಾನ ಹೊರಹಾಕಿದರು. ‘ನೀವು (ಮಲ್ಟಿಪ್ಲೆಕ್ಸ್) 700 ರೂಪಾಯಿ ಟಿಕೆಟ್ ದರ ನಿಗದಿ ಮಾಡುತ್ತೀರಿ. 100 ರೂಪಾಯಿ ನೀರಿಗೆ ಚಾರ್ಜ್ ಮಾಡುತ್ತೀರಿ. ಹೀಗಾಗಿ, ಬೆಲೆ ನಿಗದಿ ಆಗಲೇಬೇಕು. ಥಿಯೇಟರ್ ಹೋಗಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕಡಿಮೆ ಬೆಲೆ ನಿಗದಿ ಮಾಡಿ. ಆಗ ಜನರು ಸಿನಿಮಾ ನೋಡಲು ಬಂದು ಖುಷಿ ಪಡಬಹುದು. ಇಲ್ಲವಾದಲ್ಲಿ ಸಿನಿಮಾ ಮಂದಿರ ಖಾಲಿ ಹೊಡೆಯುತ್ತದೆ’ ಎಂದು ವಿಕ್ರಮ್ ನಾಥ್ ಅಭಿಪ್ರಾಯಪಟ್ಟರು.


‘ಅದು ಖಾಲಿ ಆಗೇ ಇರಲಿ ತೊಂದರೆ ಇಲ್ಲ. ಈ ಬೆಲೆ ಮಲ್ಟಿಪ್ಲೆಕ್ಸ್ಗಳಿಗೆ ಮಾತ್ರ. ಹೀಗಾಗಿ, ಜನರು ನಾರ್ಮಲ್ ಥಿಯೇಟರ್ಗಳಿಗೆ ತೆರಳಬಹುದು’ ಎಂದು ಮುಕುಲ್ ವಾದಿಸಿದರು. ‘ಆ ರೀತಿಯ ಸಿಂಗಲ್ ಸ್ಕ್ರೀನ್ಗಳು ಉಳಿದೇ ಇಲ್ಲ. ಟಿಕೆಟ್ ದರ ಕಡಿಮೆ ಆಗಬೇಕು’ ಎಂದು ವಿಕ್ರಮ್ ನಾಥ್ ಅಭಿಪ್ರಾಯಪಟ್ಟರು.


