Wed. Nov 5th, 2025

Belthangady: ಪದ್ಮುಂಜದಲ್ಲಿ‌ ವ್ಯಕ್ತಿಯೋರ್ವನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣ – ಆರೋಪಿ ಶರತ್ ಚೌಟನಿಗೆ ಜೈಲು ಶಿಕ್ಷೆ ಪ್ರಕಟ

ಬೆಳ್ತಂಗಡಿ: ಪದ್ಮುಂಜದಲ್ಲಿ ಸಿದ್ಧಿಕ್ ಎಂಬುವವರು ಚಲಾಯಿಸುತ್ತಿದ್ದ ವಾಹನ ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣದಲ್ಲಿ ಆರೋಪಿ ಶರತ್ ಚೌಟ ಎಂಬಾತನಿಗೆ ನ.4 ರಂದು ಬೆಳ್ತಂಗಡಿ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಇದನ್ನೂ ಓದಿ: 🟣ಪಟ್ರಮೆ : ಪಟ್ರಮೆ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸವರ್ಗ ಕಾರ್ಯಕ್ರಮ

ಏನಿದು ಘಟನೆ..?
2024ರ ಆಗಸ್ಟ್ 27ರಂದು ರಾತ್ರಿ 7.30ರ ವೇಳೆಗೆ ಸಿದ್ಧಿಕ್ ಎಂಬವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿ
ಕಡೆಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ರಸ್ತೆ ಬದಿಯಲ್ಲಿ ನಿಂತು ಶರತ್ ಚೌಟ ಫೋನ್ ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಸಿದ್ದಿಕ್ ಅವರನ್ನು ನೋಡಿ ಅವಾಚ್ಯವಾಗಿ ನಿಂದಿಸಿ ಸಿದ್ದಿಕ್ ಅವರ ವಾಹನವನ್ನು ತನ್ನ ಮೋಟಾರ್ ಸೈಕಲ್ ನಲ್ಲಿ ಹಿಂಬಾಲಿಸಿ ಓವರ್ ಟೇಕ್ ಮಾಡಿ ಸಿದ್ದಿಕ್ ಅವರ ವಾಹನಕ್ಕೆ ಅಡ್ಡವಾಗಿ ನಿಲ್ಲಿಸಿ ಸಿದ್ದಿಕ್ ಅವರ ವಾಹನದ ಡೋರ್ ತೆಗೆದು ಕೀ ತಿರುಗಿಸಿ ಬಂದ್ ಮಾಡಿ ಅವಾಚ್ಯವಾಗಿ ನಿಂದಿಸಿ ತಲೆ ಮತ್ತು ಎದೆಗೆ ಕೈಯಿಂದ ಗುದ್ದಿ ನೋವುಂಟು ಮಾಡಿದ್ದ. ಅಲ್ಲದೆ ಜೀವ ಬೆದರಿಕೆ ಹಾಕಿದ್ದ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 126 (2), 115(2), 352 ಮತ್ತು 351(2)ರಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಈ ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿದ ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮನು ಬಿ.ಕೆ. ಅವರು ಆರೋಪಿ ಶರತ್ ಚೌಟನನ್ನು ದೋಷಿ ಎಂದು ತೀರ್ಮಾನಿಸಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಬಿಎನ್‌ಎಸ್ 115 (2)ರ ಅಪರಾಧಕ್ಕೆ ಒಂದು ವರ್ಷ ಸಾದಾ ಜೈಲು ಶಿಕ್ಷೆ, 5 ಸಾವಿರ ರೂ ದಂಡ, ದಂಡ ಕಟ್ಟಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ, 126(2)ರಡಿಯ ಅಪರಾಧಕ್ಕೆ ಒಂದು ತಿಂಗಳು ಜೈಲು 1 ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನ ಹೆಚ್ಚುವರಿ ಜೈಲು ಶಿಕ್ಷೆ, 352 ಮತ್ತು 351(1)ರಡಿಯ ಅಪರಾಧಕ್ಕಾಗಿ ತಲಾ ಒಂದು ವರ್ಷ ಜೈಲು 3 ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದರೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ. ಮೇಲಿನ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬಹುದು ಅಲ್ಲದೆ ವಿಧಿಸಿದ ದಂಡದ ಮೊತ್ತವನ್ನು ಬಿಎನ್‌ಎಸ್‌ಎಸ್‌ ಕಲಂ 395ರಡಿ ಸಂತ್ರಸ್ತ ಸಿದ್ಧಿಕ್ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *