Mon. Nov 10th, 2025

ಉಜಿರೆ: ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ “ವಿಜ್ಞಾನದಲ್ಲಿ ಮಹಿಳೆಯರು” ಉಪನ್ಯಾಸ ಕಾರ್ಯಕ್ರಮ

ಉಜಿರೆ : ನಂಬಿಕೆಗಳ ಬದಲು ವೈಜ್ಞಾನಿಕ ನಿಖರತೆಯನ್ನೇ ಪ್ರಧಾನವಾಗಿರಿಸಿಕೊಂಡಾಗ ತಾರ್ಕಿಕತೆ ಗೆಲ್ಲುತ್ತದೆ ಎಂದು
ಎಸ್.ಡಿ.ಎಂ ಪಿಯು ಕಾಲೇಜಿನ ಉಪನ್ಯಾಸಕಿ ಸಂಧ್ಯಾ ಪಿ.ವಿ. ಹೇಳಿದರು.

ಇದನ್ನೂ ಓದಿ: 🔶ಲಾಯಿಲ: ಕನ್ನಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಭೌತಶಾಸ್ತ್ರ ವಿಭಾಗ ಮೇರಿ ಕ್ಯೂರಿ ಮತ್ತು ಲಿಸ್ ಮೈಟ್ನರ್ ಅವರ ಜನ್ಮದಿನದ
ಸ್ಮರಣಾರ್ಥ ಆಯೋಜಿಸಿದ್ದ ʻವಿಜ್ಞಾನದಲ್ಲಿ ಮಹಿಳೆಯರುʼ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬರೀ ನಂಬಿಕೆಗಳನ್ನು ನೆಚ್ಚಿಕೊಂಡಾಗ ದ್ವಂದ್ವಗಳಿರುತ್ತವೆ, ಅಭಿಪ್ರಾಯ ಬೇಧಗಳಿರುತ್ತವೆ. ಅನುಮಾನಗಳಿರುತ್ತವೆ. ಬದಲಾಗಿ
ವೈಜ್ಞಾನಿಕ ತಾರ್ಕಿಕತೆ ಇದ್ದಾಗ ಸಂಘರ್ಷ ಉದ್ಭವವಾಗುವುದಿಲ್ಲ. ಆಗ ಸ್ಪಷ್ಟತೆ ಮೂಡಿ ತಾರ್ಕಿಕತೆ ಗೆಲ್ಲುತ್ತದೆ ಎಂದು
ವಿವರಿಸಿದರು.


ಸತ್ಯದ ಜೊತೆ ಗುರುತಿಸಿಕೊಂಡಿರುವುದರಿಂದ ಜಗತ್ತಿನಲ್ಲಿ ಎಂದಿಗೂ ಸಾರ್ವತ್ರಿಕವಾಗಿ ಅನ್ವಯಿಸಬಹುದಾದ ಸಾರ್ವಕಾಲಿಕ ಸತ್ಯ
ವಿಜ್ಞಾನ. ಆದರೆ ಕೇವಲ ನಂಬಿಕೆಯನ್ನೇ ಸತ್ಯವೆಂದು ಗ್ರಹಿಸಿಕೊಂಡವರು ಮಾತ್ರ ಸಂಘರ್ಷದ ಸಂದರ್ಭಗಳನ್ನು ಸೃಷ್ಟಿಸುತ್ತಾರೆ.
ಹಾಗಾಗಿ ಇಂತಹ ನಂಬಿಕೆಗಳನ್ನು ಪ್ರಶ್ನಿಸಿ ನಿಖರವಾದ ವಿಜ್ಞಾನಿಕತೆಯ ಮುಖೇನ ಸತ್ಯದ ಅನ್ವೇಷಣೆಗೆ ಪಣತೊಟ್ಟ ಮೇರಿ ಕ್ಯೂರಿ
ಅವರಂಥ ವಿಜ್ಞಾನಿಗಳು ಪ್ರಸ್ತುತ ಸನ್ನಿವೇಶದಲ್ಲಿ ಮಹತ್ವ ಪಡೆಯುತ್ತಾರೆ ಎಂದು ವಿಶ್ಲೇಷಿಸಿದರು.


ಕನಸು ಎಲ್ಲರೂ ಕಾಣಬಹುದು. ಆದರೆ ಆ ಕಂಡ ಕನಸು ನಿದ್ದೆ ಬಾರದ ಹಾಗೆ ಮಾಡಿದರೆ ಮಾತ್ರ ನಾವಿನ್ಯತೆಯ ಅನ್ವೇಷಣೆಗೆ ದಾರಿ
ಮಾಡಿಕೊಡುತ್ತದೆ. ಈ ಸಮಾಜ ಕೆಲವೊಂದಿಷ್ಟು ಜನರಿಂದಷ್ಟೇ ನಿರ್ಧರಿತವಾದ ನಿಯಮಗಳನ್ನು ರೂಪಿಸಿಕೊಂಡಿರುವುದರಿಂದ
ಅವೆಲ್ಲವನ್ನು ಮೀರಿ ಬೆಳೆಯಬೇಕಾದ ಅಗತ್ಯವಿದೆ. ಹಾಗಾದಾಗ ಮಾತ್ರ ನಾವಿನ್ಯತೆಯ ಅನ್ವೇಷಣೆ ಸಾಧ್ಯ ಎಂದರು.
ಪ್ರಸ್ತುತ ಸಮಯದಲ್ಲಿ ಹೆಣ್ಣು ಮಕ್ಕಳು ವಿವಾಹದ ನಂತರ ಕುಟುಂಬದ ನಿರ್ವಹಣೆಯ ಸಲುವಾಗಿ ತಮ್ಮ ವೈಜ್ಞಾನಿಕ
ಅನ್ವೇಷಣೆಯಿಂದ ಬಿಡುವು ಬೇಕೆಂದು ಬಯಸುತ್ತಾರೆ. ಅವರು ಬಿಡುವಿನ ಅವಧಿಯಿಂದ ಮರಳಿ ತಮ್ಮ ಕಾರ್ಯ ಕ್ಷೇತ್ರಕ್ಕೆ ಬಂದಾಗ
ವಿಜ್ಞಾನ ಜಗತ್ತು ಸಾಕಷ್ಟು ಮುಂದುವರೆದಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳು ಮುಂದುವರಿದ ವಿಜ್ಞಾನ ಜಗತ್ತಿಗೆ
ಹೊಂದಿಕೊಳ್ಳುವುದಕ್ಕೆ ಹರಸಾಹಸ ಪಡುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಅನ್ವೇಷಣೆಯ ಉತ್ಸಾಹವೇ ಅವರಿಗೆ
ಇಲ್ಲವಾಗುತ್ತದೆ. ಹಾಗಾಗಿ ಸವಾಲುಗಳನ್ನು ಹೆಣ್ಣು ಮಕ್ಕಳು ಮೆಟ್ಟಿ ಮುಂದುವರಿಯಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

“ಮಹಿಳಾ ವಿಜ್ಞಾನಿಗಳ ಕೊಡುಗೆ ವಿಷಯದ ಬಗ್ಗೆ ಎಸ್.ಡಿ.ಎಂ ಕಾಲೇಜಿನ ಜೈವಿಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಪ್ರಾರ್ಥನಾ
ಜೆ. ಉಪನ್ಯಾಸ ನೀಡಿದರು. ಪಿ.ಎಚ್.ಡಿವರೆಗೆ ಉನ್ನತ ಶಿಕ್ಷಣ, ಮೊದಲ ನೋಬೆಲ್ ಪ್ರಶಸ್ತಿ, ಎರಡು ನೋಬೆಲ್ ಪ್ರಶಸ್ತಿಗಳನ್ನು
ಪಡೆದಿರುವುದರಿಂದ ಹಿಡಿದು ಮೇರಿ ಕ್ಯೂರಿ ಮಹಿಳೆಯರ ‘ಹಲವು ಮೊದಲುಗಳಿಗೆ’ ದಾರಿ ತೋರುವ ಮೂಲಕ ದುರ್ಗಮ
ಹಾದಿಯಲ್ಲಿಯೂ ತಮ್ಮ ಸಾಧನೆಯಿಂದ ಜಗತ್ತಿಗೆ ಆದರ್ಶಪ್ರಾಯರಾದವರು. ಹಲವು ಸವಲತ್ತಿನ ನಿರಾಕರಣೆಗಾಗಿ ತಮ್ಮ

ತಾಯಿನಾಡಿನಿಂದ ವಿದೇಶಕ್ಕೆ ಬಂದರೂ ಪ್ರಭುತ್ವಕ್ಕೆ ಸೆಡ್ಡು ಹೊಡೆದು ವೈಜ್ಞಾನಿಕ ಅನ್ವೇಷಣೆಯಲ್ಲಿ ನಿರತರಾಗಿದ್ದದ್ದು ಸದಾ
ಅನುಕರಣೀಯ ಎಂದರು.
ಭಾರತದ ಕಬ್ಬಿನ ರಾಣಿ ಎಂದೇ ಖ್ಯಾತರಾದ ಜಾನಕಿ ಅಮ್ಮಲ್ ಅವರಂತಹ ವಿಜ್ಞಾನಿಗಳು ಎಲ್ಲಾ ತೊಡಕುಗಳನ್ನು ನಿವಾರಿಸಿ
ನಾವಿನ್ಯತೆಯನ್ನು ಅನ್ವೇಷಣೆಗಾಗಿ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದ್ಧಾರೆ. ಈ ವ್ಯವಸ್ಥೆಯ ರಾಜಕೀಯ ಕುಟಿಲತೆಗಳ ಪರಿಣಾಮದಿಂದ
ಹಲವು ಸಾಧನೆಗಳು ಗೌಣವಾಗಿವೆ. ಇದಕ್ಕೆ ಲಿಸ್ ಮೈಟ್ನರ್ ಅವರಂತಹ ಶ್ರೇಷ್ಠ ಮಹಿಳಾ ವಿಜ್ಞಾನಿಯೂ ಕೂಡ ಬೆಲೆ ತೆತ್ತಿದ್ದಾರೆ.
ಇಂತಹ ವಿಷಯಗಳನ್ನು ಅರಿತುಕೊಂಡು ಪ್ರಸ್ತುತ ಜಗತ್ತು ಭವಿಷ್ಯದಲ್ಲಿ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಯೋಜಕ ಡಾ. ಡಿ. ಹಾಲೇಶಪ್ಪ, ವಿಭಾಗ ಮುಖ್ಯಸ್ಥ ಡಾ. ರಾಘವೇಂದ್ರ ಎಸ್ ಉಪಸ್ಥಿತರಿದ್ದರು. ಇದೇ
ಸಂದರ್ಭದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಮತ್ತು ಪೋಸ್ಟರ್ ವಿನ್ಯಾಸ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಒಟ್ಟು
80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *