ಬೆಂಗಳೂರು: ಯುವಕನೊಬ್ಬ ತಾನು ಚಲಾಯಿಸಿಕೊಂಡು ಬಂದ ಬೈಕನ್ನು ಜನನಿಬಿಡ ರಸ್ತೆಯಲ್ಲೇ ನಿಲ್ಲಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನ.9 ರಂದು ರಾತ್ರಿ ಸುಮಾರು 9 ಗಂಟೆಗೆ ಬಸವೇಶ್ವರನಗರದ ಹಾವನೂರು ಸರ್ಕಲ್ ಬಳಿ ನಡೆದಿದೆ. ತನ್ನದೇ ಬೈಕ್ಗೆ ಬೆಂಕಿ ಹಚ್ಚಿದ ಆರೋಪಿಯನ್ನು ಕಾಮಾಕ್ಷಿಪಾಳ್ಯ ನಿವಾಸಿ ಯಶವಂತ್ ಎಂದು ಗುರುತಿಸಲಾಗಿದೆ.

ತನ್ನ ಸ್ಪ್ಲೆಂಡರ್ ಬೈಕ್ನಲ್ಲಿ ಹಾವನೂರು ಸರ್ಕಲ್ಗೆ ಬಂದ ಆತ, ಸಿಗ್ನಲ್ ಜಂಕ್ಷನ್ನಲ್ಲೇ ಬೈಕನ್ನು ನಿಲ್ಲಿಸಿ, ಕ್ಯಾನ್ನಲ್ಲಿ ತಂದಿದ್ದ ಪೆಟ್ರೋಲನ್ನು ಬೈಕ್ ಮೇಲೆ ಸುರಿದು, ಬೆಂಕಿ ಹಚ್ಚಿ ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾನೆ.ಬೈಕ್ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ದೊಡ್ಡ ಜ್ವಾಲೆ ಕಾಣಿಸಿಕೊಂಡು, ಸ್ಥಳದಲ್ಲಿದ್ದ ವಾಹನ ಸವಾರರು ಮತ್ತು ಸಾರ್ವಜನಿಕರು ಒಂದು ಕ್ಷಣ ಆತಂಕಗೊಂಡರು.
ತಕ್ಷಣವೇ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟರಲ್ಲಿ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಇದರಿಂದ ಸ್ಥಳದಲ್ಲಿ ನೆರೆದಿದ್ದ ಜನರು ಭಯಭೀತರಾಗಿದ್ದರು.



ಕೃತ್ಯಕ್ಕೆ ಕಾರಣವೇನು?
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಈ ಬೈಕ್ ಯಶವಂತ್ಗೆ ಉಡುಗೊರೆಯಾಗಿ ಬಂದಿತ್ತು. ಬೈಕ್ ಕೊಟ್ಟವರ ಜೊತೆ ಯಾವುದೋ ವಿಚಾರಕ್ಕೆ ಜಗಳವಾಡಿಕೊಂಡಿದ್ದ ಯಶವಂತ್, ಆ ಕೋಪದಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಜ್ಯೂಸ್ ಅಂಗಡಿಯವರೊಬ್ಬರು ಮಾತನಾಡಿದ್ದು, ಸುಮಾರು ಒಂದೂವರೆ ಗಂಟೆ ಹಿಂದೆ ಆತ ಒಬ್ಬನೇ ಬಂದು ಸರ್ಕಲ್ನಲ್ಲಿ ಗಾಡಿ ನಿಲ್ಲಿಸಿ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಓಡಿಹೋದ. ಬೈಕ್ ಹೊಸದಾಗಿತ್ತು, ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಘಟನೆ ನಡೆದ ಅರ್ಧ ಗಂಟೆಯ ನಂತರ ಅಗ್ನಿಶಾಮಕ ದಳ ಬಂತು ಎಂದರು.
ಸದ್ಯ ಬಸವೇಶ್ವರನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಯಶವಂತ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


