Wed. Nov 12th, 2025

ಉಜಿರೆ: ಪ.ಪೂ ಕಾಲೇಜುಗಳ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ – ಎಸ್.ಡಿ.ಎಂ ಪ.ಪೂ ಕಾಲೇಜಿಗೆ ಚಾಂಪಿಯನ್ ಪ್ರಶಸ್ತಿ

ಉಜಿರೆ: (ನ.12) ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು, ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕ – ಬಾಲಕಿಯರ ಹ್ಯಾಂಡ್ ಬಾಲ್ ಪಂದ್ಯಾಟದ ಬಹುಮಾನ ವಿತರಣಾ ಕಾರ್ಯಕ್ರಮ ಉಜಿರೆಯ ಎಸ್.ಡಿ.ಎಂ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ: 🔆ಧರ್ಮಸ್ಥಳ: ಧರ್ಮಸ್ಥಳ ಲಕ್ಷ ದೀಪೋತ್ಸವದ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಭಾಗವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಅಭ್ಯಾಗತರಾಗಿ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ, ಮತ್ತೊರ್ವ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ರಾಷ್ಟ್ರೀಯ ಆಟಗಾರ, ಪ್ರಸ್ತುತ ಬೆಳ್ತಂಗಡಿ ಎಕ್ಸಿಸ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಆಗಿರುವ ಅರ್ವಿನ್ ಲೋಯ್ ಮೋರಸ್ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ವಹಿಸಿದ್ದರು.

ಬಹುಮಾನ ವಿತರಣಾ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್, ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ಅಲೋಶಿಯಸ್ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ನವೀನ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರು, ಸಿಬ್ಬಂದಿಗಳು, ಸಂಸ್ಥೆಯ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಪಟುಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ್ ಜೈನ್ ನಿರೂಪಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಬಿ.ಪೂಂಜ ವಂದಿಸಿದರು.

ಪ್ರಶಸ್ತಿಗಳ ವಿವರ :

ಎಸ್.ಡಿ.ಎಂ ಪ.ಪೂ ಕಾಲೇಜಿಗೆ ಚಾಂಪಿಯನ್ ಪ್ರಶಸ್ತಿ
ರನ್ನರ್ಸ್ ಳಾಗಿ – ಪ್ರೆಸಿಡೆನ್ಸಿ ಪ.ಪೂ ಕಾಲೇಜು

ಬಾಲಕರ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಅತೀಥೇಯ ಉಜಿರೆಯ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಮಂಗಳೂರಿನ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜನ್ನು ಎದುರಿಸಿದ ಎಸ್.ಡಿ.ಎಂ ತಂಡವು 11 – 04 ಅಂಕಗಳ ಅಂತರದಲ್ಲಿ ಗೆಲುವನ್ನು ಸಾಧಿಸಿತು. ತೃತೀಯ ಸ್ಥಾನವನ್ನು ಸಂತ ಅಲೋಶಿಯಸ್ ಕಾಲೇಜು ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ಒಟ್ಟು ಹತ್ತು ತಂಡಗಳು ಸ್ಪರ್ಥಿಸಿದ್ದವು.

ಬಾಲಕಿಯರ ವಿಭಾಗದ ಪಂದ್ಯಾಟದಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆಯಿತು. ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆಯಿತು.

ವೈಯಕ್ತಿಕ ಪ್ರಶಸ್ತಿಗಳು ಪೈಕಿ ಬಾಲಕರ ವಿಭಾಗದ ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಚಿನ್ಮಯ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಪ್ರೆಸಿಡೆನ್ಸಿ ಕಾಲೇಜಿನ ಆಕಾಶ್ ಹಾಗು ಬಾಲಕಿಯರ ವಿಭಾಗದ ಬೆಸ್ಟ್ ಪ್ಲೇಯರ್ ಪ್ರಶಸ್ತಿ ಕೆನರಾ ಕಾಲೇಜಿನ ರೋಶ್ನೀ ಆಳ್ವ, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಸೈಂಟ್ ಅಲೋಶಿಯಸ್ ಕಾಲೇಜಿನ ತನ್ವಿ ಪಡೆದುಕೊಂಡರು.

ಎಸ್.ಡಿ.ಎಂ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ :

ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಗಳಾಗಿರುವ ಎಸ್.ಡಿ.ಎಂ ಕಾಲೇಜಿನ ಪದವಿ ಪೂರ್ವ ಕಾಲೇಜಿನ ತಂಡವು ಈ ಮೂಲಕ ಮುಂದೆ ಚಿಕ್ಕೋಡಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬಾಲಕರ ಹ್ಯಾಂಡ್ ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ಈ ಪಂದ್ಯಾಟದಲ್ಲಿ ಎಸ್.ಡಿ.ಎಂ ತಂಡವು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದೆ. ತಂಡಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಕ್ರೀಡಾ ಸಂಘ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *