Sun. Nov 23rd, 2025

ಬೆಳ್ತಂಗಡಿ: ಅಪಘಾತದಲ್ಲಿ ಮೃತರಾದ ಹಂಝ ಬೆದ್ರಬೆಟ್ಟು ಕುಟುಂಬಕ್ಕೆ ಗುತ್ತಿಗೆದಾರರ ಕಡೆಯಿಂದ ಸಾಂತ್ವನ ನಿಧಿ ಹಸ್ತಾಂತರ

ಬೆಳ್ತಂಗಡಿ: ಮದ್ದಡ್ಕ ಮಸ್ಜಿದ್ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ವಾಹನದ ಅಡಿಗೆ ಬಿದ್ದು ದಾರುಣವಾಗಿ ಮೃತರಾದ ಬೆದ್ರಬೆಟ್ಟು ನಿವಾಸಿ ಹಂಝ ಅವರ ಕುಟುಂಬಕ್ಕೆ ಕಾಮಗಾರಿ ಗುತ್ತಿಗೆದಾರರ ಕಡೆಯಿಂದ ಸಾಂತ್ವನ ನಿಧಿ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: 🟣ಬೆಳ್ತಂಗಡಿ: ಸಿಯೋನ್ ಆಶ್ರಮದ ನಿವಾಸಿಗಳಿಗಾಗಿ ಮೂಗ್ ಇಂಡಿಯಾದ ಸಿ ಎಸ್ ಆರ್ ಯೋಜನೆಯಡಿ ಮೌಲ್ಯಮಯ ಕೊಡುಗೆ

ಸಮಾಜ ಸೇವಕ ಅಬ್ಬೋನು ಮದ್ದಡ್ಕ, ಉದ್ಯಮಿ ಡಿ.ಡಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌‌ ಕರೀಂ ಗೇರುಕಟ್ಟೆ ಇವರು ಮುತುವರ್ಜಿ ವಹಿಸಿ ಈ ಸಾಂತ್ವನ‌ನಿಧಿ ಮಂಜೂರುಗೊಳ್ಳುವಲ್ಲಿ ಶ್ರಮಿಸಿದರು.


ಮೃತ ಹಂಝ ಅವರಿಗೆ ಸ್ವಂತ ಜಾಗ ಮತ್ತು ಮನೆ ಇಲ್ಲದ್ದರಿಂದ ಈಗಲೂ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಅವರ ಏಕೈಕ ಪುತ್ರ ಧರ್ಮಗುರುವಾಗಿದ್ದು ಅಲ್ಪ ವೇತನಕ್ಕೆ ದುಡಿಯುತ್ತಿದ್ದಾರೆ.


ಮೂವರು ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡಲಾಗಿದ್ದು ಒಬ್ಬಾಕೆ ಮನೆಯಲ್ಲೇ ಇದ್ದಾರೆ. ಈ ಎಲ್ಲ ಕಷ್ಟವನ್ನು ನಿಭಾಯಿಸುವ ಸಲುವಾಗಿ ಹಂಝ ಅವರು ಇಳಿವಯಸ್ಸಿನಲ್ಲೂ ಕೂಲಿ ಮಾಡಿ ಕುಟುಂಬ ಸಾಕುತ್ತಿದ್ದರು. ಅವರೇ ಇದೀಗ ದುರ್ಘಟನೆಗೊಳಗಾಗಿ ಪ್ರಾಣ ಕಳೆದುಕೊಂಡಿದ್ದು ಕುಟುಂಬ ಸಂಕಷ್ಟಕ್ಕೆ ಗುರಿಯಾಗಿದೆ. ಈ ವಿಚಾರವನ್ನು ಗುತ್ತಿಗೆದಾರರಿಗೆ ಮನವರಿಕೆ ಮಾಡಲಾಯಿತು.

ಈ ವೇಳೆ ತಕ್ಷಣ ಸ್ಪಂದಿಸಿದ ಅವರು ಸಾಂತ್ವನನಿಧಿ ಹಸ್ತಾಂತರಿಸಿದರು. ಮುಂದೆಯೂ ಅಗತ್ಯ ಸಂದರ್ಭದಲ್ಲಿ ಸಹಕರಿಸುವ ಭರವಸೆ ನೀಡಿದ್ದಾರೆ. ಕಂಪೆನಿಯ ಯೋಜನಾ ವ್ಯವಸ್ಥಾಪಕ ದಾಮೋದರ, ಸಾರ್ವಜನಿಕ ಸಂಪರ್ಕಾಧಿಕಾರಿ ಉದಯ, ಸ್ಥಳ ಮೇಲುಸ್ತುವಾರಿ ಜಗದೀಶ್ ಅವರು ಮೃತರ ಪುತ್ರ ಅಬ್ದುಲ್ಲ ಸ‌ಅದಿ ಅವರ ನಿವಾಸದಲ್ಲಿ ಸಾಂತ್ವನ‌ ನಿಧಿ ವರ್ಗಾಯಿಸಿದರು.
ಈ ವೇಳೆ ಬೆದ್ರಬೆಟ್ಟು ಮಸ್ಜಿದ್ ಅಧ್ಯಕ್ಷ ಸಲೀಂ, ಎಸ್‌ವೈಎಸ್ ಪ್ರಮುಖ ಸಂಘಟಕ ಮಜೀದ್ ಬೆದ್ರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *