ಉಜಿರೆ: ಬಾಯಿಯ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಮಿ- ಮಂಡಿಬುಲೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಇದನ್ನೂ ಓದಿ: 🟣ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ
43 ವರ್ಷ ಪ್ರಾಯದ ರೋಗಿಯೊಬ್ಬರು 6 ತಿಂಗಳಿನಿಂದ ಬಲ ಕೆಳತುಟಿಯ ಭಾಗದಲ್ಲಿ ನೋವು ಮತ್ತು ಊತದಿಂದ ಬಳಲುತ್ತಿದ್ದು, ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಇಲ್ಲಿನ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ದೀಕ್ಷಿತ್ ರೋಗಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಬಲಕೆನ್ನೆಯಲ್ಲಿ ಗಾಯವಿದ್ದು, ಇದು ಕೆಳತುಟಿಯವರೆಗೆ ವಿಸ್ತರಿಸಿರುವುದು ಕಂಡು ಬಂದಿತ್ತು. ರೋಗಿಯನ್ನು ಇನ್ನೂ ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ರೋಗಿ ಮತ್ತು ಸಂಬಂಧಿಕರಿಗೆ ಶಸ್ತ್ರಚಿಕಿತ್ಸೆಯ ಅಗತ್ಯತೆ ಮತ್ತು ಮುಂದಿನ ಚಿಕಿತ್ಸೆಯ ಬಗ್ಗೆ ವಿವರಿಸಿದ ಬಳಿಕ ಕಿವಿ-ಮೂಗು-ಗಂಟಲು ತಜ್ಞ ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್ ಆಗಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ| ರೋಹನ್ ದೀಕ್ಷಿತ್, ಪ್ಲಾಸ್ಟಿಕ್ ಮತ್ತು ಪುನರ್ ನಿರ್ಮಾಣ ಶಸ್ತ್ರಚಿಕಿತ್ಸಕ ಡಾ| ಕೃಷ್ಣ ಪ್ರಸಾದ್ ಶೆಟ್ಟಿ ಮತ್ತು ಅರೆವಳಿಕೆ ತಜ್ಞ ಡಾ| ಸುಪ್ರೀತ್ ಆರ್. ಶೆಟ್ಟಿ ದಾದಿಯರಾದ ನಯನ,
ಶ್ವೇತಲ್, ಅನು, ಮಹಾಲಕ್ಷ್ಮಿ, ಜಾಸ್ಮಿನ್ ಮತ್ತು ಅರೆವಳಿಕೆ ಟೆಕ್ನಿಷಿಯನ್ಗಳಾದ ಮೇಘಾ, ರಮ್ಯಾ ತಂಡ ಆ.22 ರಂದು ಈ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿದರು.

ಏನಿದು ಹೆಮಿ-ಮಂಡಿಬುಲೆಕ್ಟಮಿ ಶಸ್ತ್ರಚಿಕಿತ್ಸೆ ?:
ಹೆಮಿ-ಮಂಡಿಬುಲೆಕ್ಟಮಿ ಶಸ್ತ್ರಚಿಕಿತ್ಸೆ ಎನ್ನುವುದು ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಇದು ಸಾಮಾನ್ಯವಾಗಿ ಗೆಡ್ಡೆಗಳಿಂದ, ತೀವ್ರವಾದ ಮೂಳೆ ಸೋಂಕುಗಳಿಂದ, ಅಪಘಾತ ಮತ್ತು ಬಾಯಿಯ ಕ್ಯಾನ್ಸರ್ನಿಂದಾಗಿ ಕೆಳದವಡೆಗೆ ತೊಂದರೆ ಉಂಟಾದಾಗ ಹೆಮಿ- ಮಂಡಿಬುಲೆಕ್ಟಮಿ ಶಸ್ತ್ರಚಿಕಿತ್ಸಾ ವಿಧಾನದಿಂದ ಕೆಳದವಡೆಯ ಒಂದು ಬದಿಯನ್ನು ತೆಗೆದು ಹಾಕಲಾಗುತ್ತದೆ. ಇದೇ ಶಸ್ತ್ರಚಿಕಿತ್ಸಾ ವಿಧಾನದಿಂದ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಡಾ| ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರು ರೋಗಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದರು. ಪ್ರಸ್ತುತ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ರೋಗಿ ಮತ್ತು ಸಂಬಂಧಿಕರಲ್ಲಿ ಸಂತಸ ತಂದಿದೆ. ಈಗಾಗಲೇ ಅತ್ಯಂತ ಸಂಕೀರ್ಣವಾದ ಬಾಯಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡುವಲ್ಲಿ ನಮ್ಮ ಆಸ್ಪತ್ರೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ತಿಳಿಸಿದರು.


