Tue. Dec 2nd, 2025

Ujire: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 02-12-2025, ಮಂಗಳವಾರ ಪೂರ್ವಾಹ್ನ 9.30ಕ್ಕೆ ಅನುಗ್ರಹ ಸಭಾಭವನದಲ್ಲಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಂ. ಫಾ. ಅಬೆಲ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಭವ್ಯವಾಗಿ ಪ್ರಾರಂಭವಾಯಿತು. ಆಗಮಿಸಿದ ಅತಿಥಿ ಅಭ್ಯಾಗತರನ್ನು ಶಾಲಾ ಬ್ಯಾಂಡಿನ ಮೂಲಕ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಇದನ್ನೂ ಓದಿ: 🔵ಉಜಿರೆ: ವಿಶ್ವ ಏಡ್ಸ್ ದಿನ ಪ್ರಯುಕ್ತ ಉಜಿರೆ ಶ್ರೀ ಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ಜಾಗೃತಿ ಉಪನ್ಯಾಸ


ಶಾಲಾ ಮಕ್ಕಳ ಪ್ರಾರ್ಥನೆಯ ನಂತರ ಶಾಲಾ ನಾಯಕಿ ಮಿಶೆಲ್ ಪಿಂಟೊ ಅವರು ಮನಮೋಹಕ ಸ್ವಾಗತ ಭಾಷಣದ ಮೂಲಕ ಎಲ್ಲರನ್ನು ಸ್ವಾಗತಿಸಿದರು. ನಂತರ ಶಾಲಾ ಪ್ರಾಂಶುಪಾಲರಾದ ವಂ. ಫಾ. ವಿಜಯ್ ಲೋಬೊ ಅವರು ವಾರ್ಷಿಕ ಶಾಲಾ ವರದಿಯನ್ನು ವಾಚಿಸಿದರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಿಂದ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಅವಿನಾಶ್ ರಾವ್, ಶ್ರೀಮತಿ ಪ್ರಿತೀತ ಬಂಗೇರ ಹಾಗೂ ಶ್ರೀ ಆಂಟನಿ ಫೆರ್ನಾಂಡಿಸ್ ಇವರನ್ನು ಸನ್ಮಾನಿಸಲಾಯಿತು.


ಅನುಗ್ರಹ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಯಶಸ್ವಿ ಉದ್ಯಮಿ, ಅಗ್ರಿಲೀಫ್ ಸಂಸ್ಥೆಯ ಮಾಲಕರಾದ ಶ್ರೀ ಅವಿನಾಶ್ ರಾವ್ ಅವರು ಪ್ರಾಥಮಿಕ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಶಾಲೆಯ ಅಭಿವೃದ್ಧಿ ಕುರಿತು ತಮ್ಮ ಮೆಚ್ಚುಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶ್ರೀಮತಿ ಪ್ರಿತೀತ ಬಂಗೇರ ಅವರು ಅನುಗ್ರಹ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡುತ್ತಾ, ಪ್ರತಿಯೊಬ್ಬರೂ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು ಎಂದು ಸಂದೇಶ ನೀಡಿದರು.


ಸಂಚಾಲಕರಾದ ವಂ. ಫಾ. ಅಬೆಲ್ ಲೋಬೊ ಅವರು ಅನುಗ್ರಹ ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಶಂಸಿಸಿ, ಇಲ್ಲಿ ನಡೆಯುತ್ತಿರುವ ಕಾರ್ಯಯೋಜನೆಗಳು ಇತರ ಶಾಲೆಗಳಿಗೂ ಮಾದರಿಯಾಗಲೆಂದು ಹಾರೈಸಿದರು. ವೇದಿಕೆಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಆಂಟನಿ ಫೆರ್ನಾಂಡಿಸ್, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಶಬರಾಯ ಹಾಗೂ ಶಾಲಾ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೀರಜ್ ಅವರು ಮನೋಜ್ಞವಾಗಿ ನಿರೂಪಿಸಿದರು. ಹೆಝೆಲ್ ಜಿಶಾ ಪಿಂಟೊ ಧನ್ಯವಾದಗಳನ್ನು ಸಲ್ಲಿಸಿದರು. ಅಪರಾಹ್ನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರೆದವು.

Leave a Reply

Your email address will not be published. Required fields are marked *