ಉಜಿರೆ: ಅಭ್ಯಾಸ ಹಾಗೂ ವೈರಾಗ್ಯದಿಂದ ಜೀವನದಲ್ಲಿ ಯಶಸ್ಸು ಕಾಣಲು ಭಗವದ್ಗೀತೆ ನೆರವಾಗುತ್ತದೆ. ವಿದ್ಯಾರ್ಥಿ ಧರ್ಮದ ಪರಿಪಾಲನೆ ಇದರಿಂದ ತಿಳಿದುಕೊಳ್ಳಬಹುದು. ಆಗ ಅರ್ಜುನನ ಹೃದಯ ದೌರ್ಬಲ್ಯ ಕೃಷ್ಣನು ದೂರಮಾಡಿದಂತೆ ಆಧುನಿಕ ಯುಗದಲ್ಲಿ ಭಗವದ್ಗೀತೆಯು ನಮ್ಮ ಮನಸ್ಸಿಗೆ ಘಾಸಿಯಾದಾಗ ನೆಮ್ಮದಿ ಹಾಗೂ ಪರಿಹಾರ ಕೊಡುತ್ತದೆ.

ಬುದ್ಧಿಮತ್ತೆಯನ್ನು ವರ್ಗಾಯಿಸಲು ಕೂಡ ಪ್ರಯೋಜನಕಾರಿಯಾಗಿದೆ. ಶ್ರೇಯಸ್ಸು ಮಾರ್ಗ ಹಾಗೂ ಪ್ರೇಯಸ್ಸು ಮಾರ್ಗಕ್ಕೆ ಗೀತೆಯು ಬುನಾದಿಯಾಗಿದೆ. ಒಟ್ಟಾರೆ ಭಗವದ್ಗೀತೆಯು ಭವದಗೀತೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿದ್ಯಾಲಯದ ಯೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಉದಯಸುಬ್ರಹ್ಮಣ್ಯ ಅವರು ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಸಂಸ್ಕೃತ ಸಂಘದ ಆಶ್ರಯದಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ಎಲ್ಲಾ ಧರ್ಮಗಳಿಗೆ ಹೊಸ ದರ್ಶನ ಕೊಡಬಲ್ಲ ಒಂದು ಗ್ರಂಥ ಇದ್ದರೆ ಅದು ಶ್ರೀಮದ್ ಭಗವದ್ಗೀತೆ. ಮಾನವನ ವೈಯಕ್ತಿಕ ಸಮಸ್ಯೆಗಳಿಗೆ ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಉತ್ತರ ಇದೆ. ಇದು ಬದುಕಿನ ಸ್ಪೂರ್ತಿಯ ಚಿಲುಮೆಯ ಭಾಗವಾಗಿದೆ. ಭಗವದ್ಗೀತೆಯ ಶ್ಲೋಕಗಳನ್ನು ಓದಿದಷ್ಟು ಹೊಸ ಹೊಸ ಅರ್ಥವನ್ನು ಸ್ಪುರಿಸುತ್ತಾ ಹೋಗುವುದು ಇದರ ದೊಡ್ಡ ಹೆಗ್ಗಳಿಕೆಯಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಹಂಸಿನಿ ಭಿಡೆ , ನಿಜ ಕುಲಾಲ್ ಹಾಗೂ ಅಕ್ಷರಾ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಶ್ರೀಪೂರ್ಣಾ, ಸಿರಿ.ಜಿ. ಗೌಡ , ಪಲ್ಲವಿ ಪುರಾಣಿಕ್ ಹಾಗೂ ತೇಜಸ್ವಿ ಅವರು ಧ್ಯಾನ ಶ್ಲೋಕದ ಪಠಣೆ ಮಾಡಿದರು.
ಪ್ರೀತಿ ಕೆ.ಜೆ ಸ್ವಾಗತಿಸಿ , ಸಮೃದ್ದ್ ಜೈನ್ ವಂದಿಸಿದರು. ನಿಧಿ ನಾರಾಯಣ್ ನಿರೂಪಿಸಿದರು.



