ಗೇರುಕಟ್ಟೆ: ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಅವಕಾಶವಿರುವ ಅಧಿಕಾರಿ ಹುದ್ದೆಗಳನ್ನು ಪಡೆಯಲು ಕೆಎಎಸ್,ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ಸನ್ನು ಪಡೆಯಲು ಪಿಯುಸಿ ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು.

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಜ್ಞಾನಾರ್ಜನೆಗಾಗಿ ಶಿಕ್ಷಣದ ಜೊತೆಗೆ ಸಾಮಾಜಿಕ ಋಣವನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಹಿರಿಯ ಉಪನ್ಯಾಸಕಿ ಭಾಗ್ಯಲಕ್ಷ್ಮಿ ಸಂಸ್ಥೆಯ ವಾರ್ಷಿಕ ಫಲಿತಾಂಶ ಕಳೆದ 19 ವರ್ಷಗಳಿಂದಲೂ ಉತ್ತಮವಾಗಿದ್ದು ವಿದ್ಯಾರ್ಥಿಗಳ ಹೆಚ್ಚಳಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ಸ್ಥಳೀಯರು ಸಹಕರಿಸಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಭ್ರಮರಾoಬಿಕಾ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಮುಂದುವರಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ತಿಳಿಸಿದರು.

ಅಭಿವೃದ್ಧಿ ಸಮಿತಿಯ ಸದಸ್ಯ ಸುರೇಶ್, ಶ್ರೀ ಲತಾ,ವಿದ್ಯಾರ್ಥಿ ನಾಯಕ ಭವಿಷ್ ಉಪಸ್ಥಿತರಿದ್ದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ರೀಡೆ ಸಾಂಸ್ಕೃತಿಕ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು.
ಆಂಗ್ಲ ಭಾಷಾ ಉಪನ್ಯಾಸಕಿ ಧನಶ್ರೀ ಮತ್ತು ಮಾಲತಿ, ರಕ್ಷಿತಾ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಕನ್ನಡ ಉಪನ್ಯಾಸಕಿ ಸವಿತಾ ಸ್ವಾಗತಿಸಿ ವಾಣಿಜ್ಯ ಉಪನ್ಯಾಸಕಿ ಮಾಲತಿ ವಂದಿಸಿದರು.


