Wed. Dec 3rd, 2025

Ujire: ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

ಉಜಿರೆ (ಡಿ.3 ): ಸೋಲು ಮತ್ತು ಗೆಲುವು ಪಂದ್ಯಾಟಗಳಲ್ಲಿ ಸಹಜ ಆದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಹೊಸ ಅನುಭವಗಳನ್ನು ನೀಡುತ್ತದೆ, ನಮ್ಮೊಳಗಿನ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಪಂದ್ಯಾಟಗಳಲ್ಲಿನ ಗೆಲುವು ನಿರಂತರವಾಗಿ ಲಭಿಸುವುದಿಲ್ಲ ಆದರೆ ಸೋಲು ನಾನ ಪಾಠಗಳನ್ನು ಕಲಿಸುತ್ತದೆ. ಕಲಿಕೆಯೆಂಬುದು ಜೀವನದಲ್ಲಿ ನಿರಂತರ, ವಿದ್ಯಾರ್ಥಿ ಜೀವನದಿಂದಲೇ ಇದಕ್ಕೆ ಅಡಿಪಾಯವನ್ನು ರೂಪಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಧರ್ಮಸ್ಥಳದ ಶಾಬ್ದಿಕ್ ವರ್ಮಾ ಅಭಿಪ್ರಾಯಪಟ್ಟರು

ಇದನ್ನೂ ಓದಿ; 🟣ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ – ಹರೀಶ್ ಪೂಂಜ

ಇವರು ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಉಜಿರೆಯ ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಂತರ್ ಕಾಲೇಜು ಮಂಗಳೂರು ವಿಭಾಗಮಟ್ಟ ಹಾಗು ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ವಿಶೇಷ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಇದರ ಅಂಗವಾಗಿ ಅನೇಕ ಕ್ರೀಡಾ ಕಾರ್ಯಕ್ರಮಗಳು ಇಲ್ಲಿ ಆಯೋಜನೆಗೊಂಡಿವೆ. ವಿದ್ಯಾರ್ಥಿಗಳು ಕ್ರೀಡಾ ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಡಿಸೆಂಬರ್ 3ರಂದು ಆರಂಭಗೊಂಡ ಪಂದ್ಯಾಟ ಡಿಸೆಂಬರ್ 5ರ ವರೆಗೆ ನಡೆಯಲಿದೆ. ದಿನಾಂಕ 4 ಮತ್ತು 5 ರಂದು ವಿವಿಧ ಜಿಲ್ಲೆಯ ಕಾಲೇಜುಗಳ ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲನೆಯ ದಿನದ ಆರಂಭ ಪಂದ್ಯದಲ್ಲಿ ಮಂಗಳೂರು, ಸುಳ್ಯ, ಮೂಡುಬಿದಿರೆ, ಕುಂದಾಪುರ ಸೇರಿದಂತೆ ವಿವಿಧ ಕಾಲೇಜಿನ ತಂಡಗಳು ಸೆಣಸಾಡಿದವು.

ಕಾರ್ಯಕ್ರಮದ ಮತ್ತೊರ್ವ ಅಭ್ಯಾಗತರಾಗಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ಧನ, ಕ್ರೀಡಾಂಗಣದ ಎರಡು ತ್ರೋಬಾಲ್ ಅಂಕಣಗಳಿಗೆ ರಿಬ್ಬನ್ ಎಳೆದು ಚಾಲನೆ ನೀಡಿದರು.

ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್, ಎಸ್.ಡಿ.ಎಂ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗು ತೀರ್ಪು ಗಾರರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ನಿವೇದಿತಾ ನಿರೂಪಿಸಿ, ವಿದ್ಯಾರ್ಥಿನಿ ಅಪೇಕ್ಷಾ ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಅರ್ಚನ ವಂದಿಸಿದರು. 3 ದಿನಗಳ ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ್ ಸಂಯೋಜಿಸಿದರು.

Leave a Reply

Your email address will not be published. Required fields are marked *