Mon. Dec 8th, 2025

Bengaluru: ಯುವ ವೈಭವ 2025 ಪ್ರತಿಭೆಗಳ ಸಮ್ಮಿಲನ

ಬೆಂಗಳೂರು: ನಾರಾಯಣಗುರು ಅವರ ಚಿಂತನೆಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ಮತ್ತು ಈಡಿಗ, ಬಿಲ್ಲವ ಸಮುದಾಯಗಳಲ್ಲಿ ಒಗ್ಗಟ್ಟು ಸಾಧಿಸುವ ನಿಟ್ಟಿನಲ್ಲಿ ಯುವ ವಾಹಿನಿ ಬೆಂಗಳೂರು ಘಟಕವು ‘ಯುವ ವೈಭವ-2025’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ನಗರದ ಶಿಕ್ಷಕರ ಸದನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಮುದಾಯದ ನಾಯಕರು, ಉದ್ಯಮಿಗಳು ಮತ್ತು ಯುವ ಪ್ರತಿಭೆಗಳು ಭಾಗವಹಿಸಿದ್ದರು.

ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತಾನಂದ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ನಾರಾಯಣಗುರು ಅವರ ಚಿಂತನೆಗಳ ಅರಿವನ್ನು ಯುವ ಸಮುದಾಯದಲ್ಲಿ ಮೂಡಿಸಬೇಕು. ಈಡಿಗ, ಬಿಲ್ಲವ ಸಮುದಾಯಗಳಲ್ಲಿ ಒಗ್ಗಟ್ಟು ತರಲು ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚಾಗಿ ಆಯೋಜಿಸಬೇಕು” ಎಂದು ಕರೆ ನೀಡಿದರು.

ಮುಂದುವರಿದು, “ಸಹಬಾಳ್ವೆ, ಅನ್ನೋನ್ಯತೆ ಮತ್ತು ಏಕತೆಯ ಸಂದೇಶ ಸಾರಬೇಕು. ನಮ್ಮ ಸಮಾಜದ ಪ್ರತಿಭೆಗಳಿಗೆ ವೇದಿಕೆ ಸಿಗಲಿ ಎಂಬ ಕಾರಣದಿಂದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದೇವೆ. ಮುಂದಿನ ವರ್ಷ ರಾಜ್ಯದ ಎಲ್ಲಾ ಭಾಗಗಳಲ್ಲೂ ಯುವ ವೈಭವ ಆಯೋಜಿಸಿ ಇನ್ನಷ್ಟು ಪ್ರತಿಭೆಗಳಿಗೆ ವೇದಿಕೆ ಸಿಗುವಂತಾಗಬೇಕು” ಎಂದು ಸಲಹೆ ನೀಡಿದರು.

ಉದ್ಯಮಿ ಗೋವಿಂದಬಾಬು ಪೂಜಾರಿ ಮಾತನಾಡಿ, ‘ಈಡಿಗ, ಬಿಲ್ಲವ ಸಹಿತ ಸಮುದಾಯದ ಉಪಪಂಗಡಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳು ನಡೆದರೂ ಕೆಲವರು ಬಳ್ಳಿಯನ್ನೇ ಕತ್ತರಿಸುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡದೇ ಯುವ ಸಮುದಾಯ ಒಂದುಗೂಡಬೇಕು. ಸಮುದಾಯದಲ್ಲಿ ಯಾರಾದರೂ ಕಷ್ಟದಲ್ಲಿದ್ದರೆ ಕೈ ಹಿಡಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದರು.
ನಾರಾಯಣಗುರು ವಿಚಾರ ವೇದಿಕೆಯ ಸತ್ಯಜಿತ್ ಸುರತ್ಕಲ್ ಮಾತನಾಡಿ, ‘ಈಡಿಗ, ಬಿಲ್ಲವ ಸಮಾಜದ ಉಪಜಾತಿಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಲಭ್ಯವಾಗುವಂತೆ ಮಾಡಬೇಕು. 26 ಉಪ ಪಂಗಡಗಳನ್ನು ಮೇಲೆತ್ತುವ ಕಾರ್ಯ ಎಲ್ಲರಿಂದಲೂ ಆಗಬೇಕು’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಯುವ ಕಲಾವಿದರು ಪ್ರತಿಭೆ ಅನಾವರಣಗೊಳಿಸಿದರು. ರಂಗಿನ ರಂಗೋಲಿ, ಗೀತ ಗಾಯನ, ಜ್ಞಾನರಂಗ ರಸಪ್ರಶ್ನೆ, ಗುರುಸ್ಮೃತಿ ಭಾಷಣ, ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದರು.

ಉಡುಪಿಯ ಗೀತಾಂಜಲಿ ಸುವರ್ಣ, ಕಲಾವಿದೆ ದೀಕ್ಷಾ, ಯುವ ವಾಹಿನಿ ಬೆಂಗಳೂರು ಅಧ್ಯಕ್ಷ ಶಶಿಧರ ಕೋಟ್ಯಾನ್, ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ, ನಟಿ ಭವ್ಯಶ್ರೀ ಪೂಜಾರಿ, ಸುಧೀರ್‌ಕುಮಾ‌ರ್ ಪೆರಾಡಿ, ಭಾವನಾ, ಕಾರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *