ಉಜಿರೆ (ಡಿ.11): ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 2025 ರ ಲಕ್ಷದೀಪೋತ್ಸವಕ್ಕೆ ಸಂಬಂಧಿಸಿದಂತೆ ಹೊರತಂದ ‘ದೀಪ ಸಮನ್ವಯ’ ಮತ್ತು ವಿಡೀಯೋ ವಿವರಗಳ ಕ್ಯೂಆರ್ ಕೋಡ್ ಜೊತೆಗಿನ ‘ದೀಪ ದೃಶ್ಯ’ ವಿಶೇಷ ಸಂಚಿಕೆಗಳನ್ನು ರಾಜ್ಯಸಭಾ ಸದಸ್ಯರೂ ಆದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.

ಇದನ್ನೂ ಓದಿ: 🔶ಧರ್ಮಸ್ಥಳ : ಧರ್ಮಸ್ಥಳ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರತಿಭಾ ದಿನಾಚರಣೆ
ಲಕ್ಷದೀಪೋತ್ಸವದ ಸಂದರ್ಭದಲ್ಲಿ ಆಯೋಜಿತವಾದ ಪಾದಯಾತ್ರೆ, ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳ ಕುರಿತ ಸಮಗ್ರ
ಚಿತ್ರಣವನ್ನೊಳಗೊಂಡ ‘ದೀಪ ಸಮನ್ವಯ’ ಸಂಚಿಕೆಯ ಮಹತ್ವದ ಪುಟಗಳನ್ನು ವಿದ್ಯಾರ್ಥಿ ಸಂಪಾದಕರ ಸಮ್ಮುಖದಲ್ಲಿಯೇ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅವಲೋಕಿಸಿದರು. ವಸ್ತು ಪ್ರದರ್ಶನದ ಮಳಿಗೆಗಳಿಗೆ ಸಂಬಂಧಿಸಿದಂತೆ ಪ್ರಕಟಿತ ವಿಶೇಷ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ದೀಪ ದೃಶ್ಯ’ ಸಂಚಿಕೆಯಲ್ಲಿ
ಅಡಕವಾದ ವಿಡಿಯೋ ಸಂಬಂಧಿತ ವಿವರಗಳನ್ನ ಗಮನಿಸಿ ಕ್ಯೂಆರ್ ಕೋಡ್ ಮೂಲಕ ಅನಾವರಣಗೊಂಡ ವಿಡೀಯೋಗಳನ್ನು ವೀಕ್ಷಿಸಿ ಉತ್ತಮ ಪ್ರಯತ್ನ ಎಂದು ಶ್ಲಾಘಿಸಿದರು.
ಅಧ್ಯಯನನಿರತರಾಗಿದ್ದಾಗಲೇ ಬರವಣಿಗೆ, ಫೋಟೋ ಮತ್ತು ವೀಡಿಯೋಗಳ ಮೂಲಕ ಲಕ್ಷದೀಪೋತ್ಸವದ ಸಂದರ್ಭವನ್ನು ದಾಖಲಿಸುವ ಪ್ರಯತ್ನ ವೃತ್ತಿಪರತೆಯ ಕುರಿತ ಶ್ರದ್ಧೆಯನ್ನು ಸಂಕೇತಿಸುತ್ತದೆ ಎಂದರು. ಇದೇ ಬಗೆಯ ತೊಡಗಿಸಿಕೊಳ್ಳುವಿಕೆಯೊಂದಿಗೆ ಸಮೂಹ ಮಾಧ್ಯಮಗಳಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ವಿಶೇಷ ಸಂಚಿಕೆಗಳ ಪ್ರಯೋಗಶೀಲತೆಯ ಹಿನ್ನೆಲೆ ವಿವರಿಸಿದರು. ಪ್ರತಿವರ್ಷವೂ ವಿಭಿನ್ನ ಪ್ರಯೋಗಶೀಲ ಹೆಜ್ಜೆಗಳೊಂದಿಗೆ ಗುರುತಿಸಿಕೊಳ್ಳುವ ವಿದ್ಯಾರ್ಥಿಗಳು ವಿಭಾಗದ ಪ್ರಭಾವಳಿಯನ್ನು ಹೆಚ್ಚಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ವಿಭಾಗದ ವಿದ್ಯಾರ್ಥಿ ಬರಹಗಾರರು ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ವಿವರಗಳನ್ನು ದೀಪ ಸಮನ್ವಯ ಸಂಚಿಕೆಯ ಮೂಲಕ ದಾಖಲಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ 2017-18ರಲ್ಲಿ ಲಕ್ಷದೀಪೋತ್ಸವ ಸಂಬಂಧಿತ ಬರಹಗಳೊಂದಿಗಿನ ಮೊದಲ ಸಂಚಿಕೆ ಬಿಡುಗಡೆಯಾಗಿತ್ತು. ಕಳೆದ ಏಳು ವರ್ಷಗಳಿಂದ ದೀಪ ಸಮನ್ವಯ ಸಂಚಿಕೆ ಪ್ರಕಟವಾಗುತ್ತಿದೆ. ಪ್ರತಿ ವರ್ಷವೂ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಕಿರು ವಿಡೀಯೋಗಳ ಮೂಲಕ ವಿದ್ಯಾರ್ಥಿಗಳು ಮಹತ್ವದ ವಿವರಗಳನ್ನು ದಾಟಿಸುತ್ತಿದ್ದರು. ಆ ವಿವರಗಳನ್ನೊಳಗೊಂಡ ಕ್ಯೂಆರ್ ಕೋಡ್ನೊಂದಿಗಿನ ‘ದೀಪದೃಶ್ಯ’ ಸಂಚಿಕೆಯನ್ನೂ ಕಳೆದ ವರ್ಷದಿಂದ ವಿದ್ಯಾರ್ಥಿಗಳು ರೂಪಿಸುತ್ತಿದ್ದಾರೆ ಎಂದು ಡಾ.ಭಾಸ್ಕರ ಹೆಗಡೆ ಪ್ರಸ್ತಾಪಿಸಿದರು. ವಿಶೇಷ ಸಂಚಿಕೆಗಳನ್ನು ಮಾತೃಶ್ರೀ ಡಾ.ಹೇಮಾವತಿ ಹೆಗ್ಗಡೆ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರಕುಮಾರ್ ಅವರಿಗೂ ಸಲ್ಲಿಸಲಾಯಿತು. ವೃತ್ತಿಪರ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ರೂಢಿಸಿಕೊಳ್ಳುವ
ಮೌಲಿಕ ಅಂಶಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.




