Sun. Dec 14th, 2025

Madikeri: ಚೆಂದುಳ್ಳಿ ಚೆಲುವೆಯ ಮಾತಿಗೆ ಮರುಳಾಗಿ ಹೋಗಿದ್ದವ ಬೆತ್ತಲಾದ..!

ಮಡಿಕೇರಿ : ಮಹಿಳೆಯೊಬ್ಬಳು ಕರೆದಿದ್ದಾಳೆಂದು ಮಡಿಕೇರಿಗೆ ಬಂದಿರುವ ಮಂಡ್ಯ ಜಿಲ್ಲೆ ಮದ್ದೂರಿನ ಮಹೇಶನಿಗೆ ನರಕದ ಅನುಭವ ಎದುರಾಗಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಮಂಡ್ಯದಿಂದ ಮಡಿಕೇರಿಗೆ ಬಂದ ಯುವಕನನ್ನು, ಮನೆಯೊಂದರಲ್ಲಿ ಕೂಡಿಹಾಕಿ ಹಣಕ್ಕಾಗಿ ಹಲ್ಲೆ ನಡೆಸಲಾಗಿದೆ. ಹೇಗೋ ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಯುವಕ, ಓಡೋಡಿ ಬಂದು ಮಡಿಕೇರಿ‌ನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಇದೊಂದು ಹನಿಟ್ರ್ಯಾಪ್ ಜಾಲದ ಕೃತ್ಯವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಅಂತಾರಾಷ್ಟ್ರೀಯ ಉದ್ಯಮಿ,‌ ಧಾರ್ಮಿಕ ಮುಖಂಡ ಕುಟ್ಟೂರ್ ಹಾಜಿ ಬೆಳ್ತಂಗಡಿಗೆ ಭೇಟಿ

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹೇಶಗೆ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಆಹ್ವಾನದ ಮೇರೆಗೆ ಶುಕ್ರವಾರ ಸಂಜೆ ಮಡಿಕೇರಿಗೆ ಬಂದ ಮಹೇಶ, ಒಂಟಿಯಾಗಿ ಇದ್ದುದನ್ನು ಗಮನಿಸಿದ ಮಹಿಳೆ ಮಡಿಕೇರಿಯ ಮಂಗಳಾದೇವಿ ನಗರದ ಮನೆಯೊಂದಕ್ಕೆ ಕರೆಸಿಕೊಂಡಿದ್ದಾಳೆ.ಕೆಲಕಾಲ ಮಾತನಾಡಿ ಪಾನೀಯ ಸೇವಿಸಿದ ಬಳಿಕ ಮಡಿಕೇರಿಯ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಿದ್ದ ಆಕೆ, ಅಚಾನಕ್ ಫೋನ್ ಕರೆ ಬಂದ ಕಾರಣ ಸಂಬಂಧಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿ ಹೊರಟಿದ್ದಾಳೆ. ಅದೇ ಸಮಯದಲ್ಲಿ ರೂಮಿಗೆ ನುಗ್ಗಿದ ನಾಲ್ವರು ಯುವಕರು ಮಹೇಶ ಬಳಿ ಇದ್ದ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.

ಬಳಿಕ ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ. ಬಳಿಕ ಮೂತ್ರ ಮಾಡುತ್ತೇನೆಂದು ಹೇಳಿ ಗ್ಯಾಂಗ್​​ನಿಂದ ತಪ್ಪಿಸಿಕೊಂಡ ಮಹೇಶ್, ಮನೆಯಿಂದ ಹೊರಗೆ ಓಡಿಬಂದಿದ್ದಾನೆ. ಆದರೂ ಆರೋಪಿಗಳು ಆಟೋದಲ್ಲಿ ಅಪಹರಣಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾದ ಮಹೇಶ್, ಅರೆಬೆತ್ತಲಾಗಿ ಓಡಿಬಂದು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ಹಲ್ಲೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಹನಿಟ್ರ್ಯಾಪ್ ಪ್ರಕರಣವಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಂದೆಡೆ ಮಡಿಕೇರಿಯ ವಿವಾಹಿತ ಮಹಿಳೆ ಮಹೇಶ್​​​ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ತಿಳಿದ ಮಹಿಳೆಯ ಕಡೆಯವರು ಮಹೇಶನನ್ನು ಪ್ಲ್ಯಾನ್ ಮಾಡಿ ಕರೆಯಿಸಿಕೊಂಡು ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

Leave a Reply

Your email address will not be published. Required fields are marked *