Tue. Dec 16th, 2025

ಉಜಿರೆ:(ಡಿ.22 ) ನವೀಕೃತಗೊಂಡು ಉದ್ಘಾಟನೆಗೆ ಸಿದ್ಧಗೊಂಡಿರುವ ಉಜಿರೆಯ ಸಂತ ಅಂತೋನಿ ಚರ್ಚ್

ಉಜಿರೆ: ಪವಾಡ ಪುರುಷರೆಂದು ಜಗತ್ ಪ್ರಸಿದ್ಧರಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲ್ಪಟ್ಟ ಉಜಿರೆ ಧರ್ಮಕೇಂದ್ರವು ದುರಸ್ತಿ ಮತ್ತು ನವೀಕರಣಗೊಂಡು ಡಿಸೆಂಬರ್ 22ರಂದು ಆಶೀರ್ವಚನಗೊಳ್ಳಲು ಸಿದ್ಧವಾಗಿದೆ.
1969ರ ತನಕ ಉಜಿರೆ ಕ್ರೈಸ್ತ ವಿಶ್ವಾಸಿಗಳು ಬೆಳ್ತಂಗಡಿಯ ಹೋಲಿ ರಿಡೀಮರ್ ಧರ್ಮಕೇಂದ್ರಕ್ಕೆ ತೆರಳಿ ತಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ಅಂದಿನ ದಿನಗಳಲ್ಲಿ ಬೆಳ್ತಂಗಡಿಯ ಧರ್ಮಗುರುಗಳಾಗಿರುವ ವಂದನೀಯ ಇ.ಪಿ.ಡಾಯಸ್ ಸ್ವಾಮಿಯವರು ಈ ಜನರ ಕಷ್ಟಗಳನ್ನು ಮನಗಂಡು ಉಜಿರೆಯಲ್ಲೇ ಒಂದು ದೇವಾಲಯವನ್ನು ನಿರ್ಮಿಸಲು ಯೋಚಿಸಿದರು ಹಾಗೂ ತಾನು ಯೋಚಿಸಿದ ಕಾರ್ಯವನ್ನು ಮುನ್ನಡೆಸುತ್ತಾ ಬಂದರು. 1969ರಲ್ಲಿ ಉಜಿರೆಯಲ್ಲಿ ಒಂದು ಚಿಕ್ಕ ಚರ್ಚ್ ನಿರ್ಮಿಸುವ ಜೊತೆಗೆ ತಾವೂ ಕೂಡಾ ಉಜಿರೆ ಧರ್ಮಕೇಂದ್ರದ ಪ್ರಥಮ ಧರ್ಮಗುರುವಾಗಿ ನಿಯುಕ್ತಿಗೊಂಡರು. ಸರಿಸುಮಾರು 40 ಕ್ರೈಸ್ತ ಕುಟುಂಬಗಳನ್ನು ಹೊಂದಿದ್ದ ಈ ಧರ್ಮಕೇಂದ್ರವನ್ನು ಪದುವಾದ ಸಂತ ಅಂತೋನಿಯವರ ಹೆಸರಿಗೆ ಸಮರ್ಪಿಸಲಾಯಿತು.

ವರ್ಷಗಳು ಕಳೆದಂತೆ, ಭಕ್ತಾದಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಭಕ್ತಾದಿಗಳ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಕಟ್ಟಡವು ಚಿಕ್ಕದಾಯಿತು. 1995ರಲ್ಲಿ ಧರ್ಮಗುರುಗಳಾದ ವಂದನೀಯ ಆ್ಯಂಡ್ರೂ ಡಿಸೋಜರವರ ಮುಂದಾಳತ್ವದಲ್ಲಿ ಹೊಸ ಚರ್ಚ್ ನಿರ್ಮಾಣಗೊಂಡಿತು. ಕಳೆದ ಸುಮಾರು 31 ವರ್ಷಗಳಿಂದ ಈ ಚರ್ಚ್‌ ನಲ್ಲಿ ಭಕ್ತಾದಿಗಳು ತಮ್ಮ ಆಧ್ಯಾತ್ಮಿಕ ಜೀವನಕ್ಕೆ ಮುನ್ಸೂಚನೆ ಪಡೆಯುತ್ತಿದ್ದಾರೆ.

ಆದರೆ ಕೆಲವು ವರ್ಷಗಳಿಂದ, ಈ ಚರ್ಚಿನ ಶಿಲುಬೆ ಗೋಪುರವು ಕ್ಷೀಣಿಸುತ್ತಾ ಬಂದಿದ್ದು, ದುರಸ್ತಿ ಹಂತಕ್ಕೆ ತಲುಪಿತ್ತು. ಈ ಗೋಪುರವನ್ನು ನವೀಕರಿಸಬೇಕು ಹಾಗೂ ಚರ್ಚನೊಳಗೆ ಸ್ಥಳದ ವಿಸ್ತರಣೆಯನ್ನು ಮಾಡಬೇಕೆಂದು ಭಕ್ತಾದಿಗಳ ಕೋರಿಕೆಯಾಗಿತ್ತು. ಈ ಯೋಜನೆಯನ್ನು ಸಂಪೂರ್ಣಗೊಳಿಸಲು ಬೇಕಾಗುವಷ್ಟು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ಸ್ಥಳೀಯ ಭಕ್ತಾದಿಗಳಿಂದ ಅಸಾಧ್ಯವಾಗಿರುವುದರಿಂದ, ಸರಕಾರದ ಬಳಿ ಸಹಾಯಕ್ಕಾಗಿ ವಿನಂತಿಸಲಾಯಿತು. ಸರಕಾರವೂ ನಮ್ಮ ವಿನಂತಿಗೆ ಸೂಕ್ತ ಸ್ಪಂದನೆ ನೀಡಿತು. ಅಲ್ಪಸಂಖ್ಯಾತ ಇಲಾಖೆಯಿಂದ 50ಲಕ್ಷ ರೂಪಾಯಿ ಮಂಜೂರಾಗಿದ್ದು, 25 ಲಕ್ಷ ರೂಪಾಯಿ ದೊರೆತಿದೆ. ಒಟ್ಟಿನಲ್ಲಿ ಸುಮಾರು 1 ಕೋಟಿ 20 ಲಕ್ಷ ರೂ.ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ಡಿಸೆಂಬರ್ 22ರಂದು ನವೀಕರಣಗೊಂಡ ಧರ್ಮಕೇಂದ್ರದಲ್ಲಿ ಆಶೀರ್ವಚನ ಕಾರ್ಯವು ನಡೆಯಲಿದೆ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನಾರವರು ಆಶೀರ್ವಚನ ನೀಡಿ ಬಲಿಪೂಜೆಯನ್ನು ಅರ್ಪಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿರುವರು. ಅವರೊಂದಿಗೆ ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾಗಿರುವ ವಂದನೀಯ ವಾಲ್ವರ್ ಡಿಮೆಲ್ಲೊ ಸ್ವಾಮಿಯವರು, ವಲಯದ ಇತರ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗಿಗಳಾಗಲಿದ್ದಾರೆ. ಧರ್ಮಭಗಿನಿಯರೂ, ಭಕ್ತಾದಿಗಳೂ ಭಾಗವಹಿಸಿ ಆ ದಿನವು ಒಂದು ವಿಶೇಷ ಸಂಭ್ರಮದ ದಿನವಾಗಿ ರೂಪುಗೊಳ್ಳಲಿದೆ.
ಬಲಿಪೂಜೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರಿನ ಧರ್ಮಾಧ್ಯಕ್ಷರು ಅಧ್ಯಕ್ಷತೆ ವಹಿಸಲಿರುವರು. ಎಮ್.ಎಲ್.ಸಿ. ಶ್ರೀ ಐವನ್ ಡಿಸೋಜ ರವರು ಮುಖ್ಯ ಅತಿಥಿಗಳಾಗಿರುವರು. ಸಕರಾದ ಶ್ರೀ ಹರೀಶ್ ಪೂಂಜ, ವಲಯ ಪ್ರಧಾನ ಗುರುಗಳಾಗಿರುವ ವಂದನೀಯ ವಾಲ್ವರ್ ಡಿಮೆಲ್ಲೊ, ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ, ಎಮ್.ಎಲ್.ಸಿ. ಶ್ರೀ ಪ್ರತಾಪಸಿಂಹ ನಾಯಕ್, ಶ್ರೀ ಭೋಜೇಗೌಡ, ಮೆಸ್ಕಾಂನ ಚೇರ್ಮಾನ್ ಶ್ರೀ ಹರೀಶ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ಕಾರಂತ್, ಕೆ.ಪಿ.ಸಿ.ಸಿ.ಕಾರ್ಯದರ್ಶಿ ಶ್ರೀ ರಕ್ಷಿತ್ ಶಿವರಾಂ. ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾಧಿಕಾರಿ ಶ್ರೀ ಜಿನೇಂದ್ರ ಎಂ., ಉಜಿರೆ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಜನಾಬ್ ಅಬೂಬಕ್ಕರ್ ಯು.ಹೆಚ್. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಗೆ ಗೌರವಿಸುವ, ಸನ್ಮಾನಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಭಾ ಕಾರ್ಯಕ್ರಮದ ಬಳಿಕ ಬಂದಿರುವ ಎಲ್ಲಾ ಭಕ್ತಾದಿಗಳಿಗೆ ಶುಚಿ-ರುಚಿಯಾದ ಊಟದ ವ್ಯವಸ್ಥೆ ಇರುವುದು.
ಈ ಕಾರ್ಯಕ್ಕೆ ಈ ಹಿಂದೆ ಧರ್ಮಕೇಂದ್ರದಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಆಗಮಿಸಲಿರುವರು, ಚರ್ಚ್ ವ್ಯಾಪ್ತಿಯಿಂದ ನಿಯುಕ್ತಿಗೊಂಡ ಧರ್ಮಗುರುಗಳೂ, ಧರ್ಮಭಗಿನಿಯರೂ ಆಗಮಿಸಿ ಕಾರ್ಯಕ್ರಮದ ಚೆಂದವನ್ನು ಹೆಚ್ಚಿಸಲಿದ್ದಾರೆ. ಸಂತ ಅಂತೋನಿಯವರ ಭಕ್ತರಾಗಿರುವ ಊರ ಪರವೂರ ವಿಶ್ವಾಸಿಗಳು ಆಗಮಿಸಲಿದ್ದು ಚರ್ಚ್ ವಠಾರವು ಜನಜಂಗುಳಿಯಿಂದ ತುಂಬಲಿದೆ. ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಆಶೀರ್ವಚನದ ಪ್ರಯುಕ್ತ ಅದೇ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಾ ಪರ್ಕ ಕಲಾವಿದರು ಕುಡ್ಲ ಇವರು ಅಭಿನಯಿಸುವ ‘ಎನ್ನನೇ ಕಥೆ’ಎಂಬ ತುಳು ಹಾಸ್ಯಮಯ ನಾಟಕವು ಕೂಡ ಪ್ರದರ್ಶನಗೊಳ್ಳಲಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಚರ್ಚಿನ ಧರ್ಮ ಗುರುಗಳಾದ ಫಾ! ಅಬೆಲ್ ಲೋಬೊ, ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ, ಹಾಗೂ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಆ್ಯಂಟನಿ ಫೆರ್ನಾಂಡಿಸ್‌, ಕಾರ್ಯದರ್ಶಿಯಾದ ಶ್ರೀ ಲಿಗೋರಿ ವಾಸ್ ಹಾಗೂ ಆರ್ಥಿಕ ಸಮಿತಿಯ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *