ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿಯ ಶಾಲೆಯ ಸಭಾಂಗಣದಲ್ಲಿ ಸುದೀರ್ಘ ವರ್ಷಗಳ ಕಾಲ ಶಿಕ್ಷಕರಾಗಿ, ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕ ಸುರೇಶ್ ಕುಮಾರ್ ರವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಶಿಕ್ಷಕರು ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು, ಎರಡನೇಯದು ಬೋಧನಾ ವಿಷಯವನ್ನು ವಿಶೇಷವಾಗಿ ಪ್ರೀತಿಸಬೇಕು, ನಂತರ ವೃತ್ತಿಯನ್ನು ಪ್ರೀತಿಸಬೇಕು ಬಳಿಕ ತಾನಿರುವ ಸಂಸ್ಥೆಯನ್ನು ಗೌರವದಿಂದ ಕಾಣಬೇಕು. ಈ 4 ಗುಣಗಳನ್ನು ತನ್ನ ಮೈಗೂಡಿಸಿಕೊಳ್ಳುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಶಿಕ್ಷಕರು ಸೇರಿದಂತೆ ಶಿಷ್ಯ ವರ್ಗವು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ.

ಸಮಾರಂಭದಲ್ಲಿ ಶಾಲೆಯ ವತಿಯಿಂದ ನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಶಾಲು ಹೊದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರ ಕಾಲಾವಧಿಯಲ್ಲಿ ಸಾಧಿಸಿದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗು ಕ್ರೀಡಾ ಸಾಧನೆಯ ಹಿಂದಿನ ಪ್ರೋತ್ಸಾಹ ಮತ್ತು ಸಹಕಾರವನ್ನು ನೆನೆದು ವಿಶೇಷ ಅಭಿನಂದನೆಯನ್ನು ತಿಳಿಸಿ, ನಿವೃತ್ತ ಬದುಕಿಗೆ ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ್ ಕುಮಾರ್, ಪ್ರೀತಿ ಮತ್ತು ಸಹಕಾರದಿಂದ ಎಲ್ಲವು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶಿಕ್ಷಕರೆಲ್ಲರು ಒಗ್ಗಟ್ಟಿನಿಂದ ಸೇವೆ ಮಾಡಿ ಎಂದರು.

ಶಾಲೆಯ ವಿದ್ಯಾರ್ಥಿಗಳಾದ ಶೃತಿ, ನಿಶ್ಚಿತ್ ನಿವೃತ್ತ ಶಿಕ್ಷಕರ ಪ್ರೋತ್ಸಾಹ ಮತ್ತು ಸಹಕಾರವನ್ನು ಮೆಲುಕು ಹಾಕಿದರು. ಅಧ್ಯಾಪಕರಾದ ವಿಶ್ವನಾಥ್ ಮತ್ತು ತ್ರಿವೇಣಿ ತಮ್ಮ ವೃತ್ತಿ ಬದುಕಿನೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಶಿಕ್ಷಕಿ ಸುಮಾ ಗೌರವ ಸನ್ಮಾನ ಪತ್ರ ವಾಚಿಸಿದರು. ಎಸ್.ಡಿ. ಎಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಅಮರೇಶ್ ವಿದ್ಯಾರ್ಥಿದೆಸೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರಿಗೆ ವಿಶೇಷ ಅಭಿನಂದನೆಯನ್ನು ಅರ್ಪಿಸಿ, ಅನಿಸಿಕೆಯನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಶಶಿಶೇಖರ್ ಕಾಕತ್ಕಾರ್, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಧನ್ಯ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ ಕಿರಣ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಅರ್ಚನಾ ನಿರೂಪಿಸಿ, ಹಿರಿಯ ಶಿಕ್ಷಕ ರವೀಶ್ ಕುಮಾರ್ ವಂದಿಸಿದರು.


