ಉಜಿರೆ (ಡಿ.22): ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (CBSE ) ಶಾಲೆಯ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಲಾದ ಎರಡು ದಿನದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಲಾಬ್ಧಿ – 2025 ಗೆ ಚಾಲನೆ ನೀಡಲಾಯಿತು.

ಉಜಿರೆಯ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಉಷಾ ಕಾರಂತ್ ಮತ್ತು ಉಪಾಧ್ಯಕ್ಷ ರವಿ ಬರಮೇಲು, ವಿದ್ಯಾರ್ಥಿಗಳು ಮತ್ತು ಪೋಷಕರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ಶಶಿಶೇಖರ್ ಕಾಕತ್ಕಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ಮನಮೋಹನ್ ನಾಯ್ಕ್, ವಿದ್ಯಾರ್ಥಿ ಸಂಘದ ನಾಯಕ ಸಿಯೋನ್ ರಾಜ್ ಸೇರಿದಂತೆ ಇತರೆ ಶಿಕ್ಷಕರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳು ವಿಶೇಷವಾಗಿ ತಯಾರಿಸಿದ ‘ಕಲಾಬ್ದಿ -2025’ ಭಿತ್ತಿಫಲಕದ ಕಲಾ ಕುಸುರಿಯನ್ನು ಬಿಡುಗಡೆಗೊಳಿಸಿದರು.

ಸಂಗೀತ, ಕರಾಟೆ, ಹಾರ್ಮೋನಿಯಂ, ಭರತನಾಟ್ಯ, ಯಕ್ಷಗಾನ, ನಾಟಕ ಇತ್ಯಾದಿ ಲಲಿತ ಕಲೆಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ತಾಲೂಕು, ಜಿಲ್ಲೆಗಳಲ್ಲಿ ಗುರುತಿಸಿ ವಂತೆ ಮಾಡಿದ ಶಿಕ್ಷಕರು ಸೇರಿದಂತೆ ಸ್ಕೌಟ್ ಗೈಡ್ ಹಿಮಾಲಯ ವುಡ್ ಬಾಜ್ ತರಬೇತಿ ಪಡೆದ ಶಿಕ್ಷಕರಿಗೆ ಮತ್ತು ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಿರು ಸಭಾ ಕಾರ್ಯಕ್ರಮದ ಬಳಿಕ ಪುಟಾಣಿ ವಿದ್ಯಾರ್ಥಿಗಳಿಂದ ಬಣ್ಣ ಬಣ್ಣದ ಉಡುಗೆ ತೊಡುಗೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ವಿಶೇಷವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ಪೋಷಕರು ಸಹ ನೃತ್ಯ ಪ್ರದರ್ಶನ ನೀಡಿದರು.

ಪ್ರತಿಭಾ ಸಮಾರಂಭದಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿಗಳು, ಶಿಕ್ಷರು , ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು. ಸಮಾರಂಭವನ್ನು ಶಾಲೆಯ ಆಂಗ್ಲ ಭಾಷಾ ಅಧ್ಯಾಪಕಿ ನೀತು ಪ್ರಸಾದ್ ಮತ್ತು ಶಾಂತಿ ಜಾರ್ಜ್ ನಿರೂಪಿಸಿ, ವಂದಿಸಿದರು.


