ರಾಮನಗರ : ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ, ಪ್ರೀತಿಗೆ ಯಾವುದೇ ಗಡಿಗಳಿಲ್ಲ ಅಂತಾರೆ. ಹಾಗೆ ಪ್ರೀತಿಗೆ ಕಣ್ಣಿಲ್ಲ ಅದು ಹೃದಯವನ್ನೇ ಆರಿಸಿಕೊಳ್ಳುತ್ತದೆ ಅಂತಾರೆ. ಅದರಂತೆ 40 ವರ್ಷದ ವ್ಯಕ್ತಿ ಹಾಗೂ 19 ರ ವಯಸ್ಸಿನ ಯುವತಿ ನಡುವೆ ಪ್ರೇಮಾಂಕುರವಾಗಿದೆ.

ಇದನ್ನೂ ಓದಿ: ಬಂಟ್ವಾಳ: ಮದುವೆ ಸಂಭ್ರಮದ ನಡುವೆ ಶಾಕ್
ಆತನಿಗೆ 40 ವರ್ಷ. ಆ ಯುವತಿಗೆ 19 ವರ್ಷ. ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಹದಿನೈದು ದಿನಗಳ ಕೆಳಗೆ ಇಬ್ಬರು ಓಡಿಹೋಗಿದ್ರು. ಈ ವಿಚಾರ ಯುವತಿಯ ತಂದೆಯನ್ನು ಕೆರಳುವಂತೆ ಮಾಡಿದ್ದು, ತನ್ನ ಮಗಳನ್ನು ಪ್ರೀತಿಸಿದವನನ್ನು ಕಿಡ್ನಾಪ್ ಮಾಡಿ, ಬಳಿಕ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಬಣ್ಣ ಬಣ್ಣದ ಮಾತುಗಳನ್ನು ಆಡಿ ಮಗಳನ್ನು ಬಲೆಗೆ ಬೀಳಿಸಿಕೊಂಡಿದ್ದ ಪ್ರಿಯಕರನೊಬ್ಬನನ್ನು ಯುವತಿಯ ತಂದೆ, ತನ್ನ ಬಾಮೈದರ ಜೊತೆ ಸೇರಿ ಭೀಕರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಬಳಿ ನಡೆದಿದೆ. ಮೂಲತಃ ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ಹಾಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿರುವ ಚೆಲುವ (40) ಹತ್ಯೆಯಾದ ವ್ಯಕ್ತಿ.

ಅಂದಹಾಗೆ ಕೊತ್ತಗೆರೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಚೆಲುವ, ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ತನ್ನ ಸಂಬಂಧಿಯೇ ಆದ ಕೆಂಪಣ್ಣ ಎಂಬುವವರ 19 ವರ್ಷದ ಮಗಳನ್ನು ಪ್ರೀತಿಸುತ್ತಿದ್ದ. ಕಳೆದ ಹದಿನೈದು ದಿನಗಳ ಕೆಳಗೆ ಯುವತಿಯನ್ನು ಕರೆದುಕೊಂಡು ಮಂಡ್ಯದ ಕೆಎಂ ದೊಡ್ಡಿಯ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದ. ಆನಂತರ ರಾಜಿ ಪಂಚಾಯತಿ ನಡೆದು ಯುವತಿಯನ್ನು ವಾಪಾಸ್ ಕೆಂಪಣ್ಣ ಮನೆಗೆ ಕರೆತಂದಿದ್ದ.

ಇದಾಗಿ ಮೂರು ದಿನಗಳ ಕೆಳಗೆ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಚೆಲುವ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಇದರಿಂದ ಕುಪಿತಗೊಂಡ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ, ಮಂಜು ಎಂಬುವರೊಂದಿಗೆ ಸೇರಿ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ಚೆಲುವನನ್ನು ಕಿಡ್ನಾಪ್ ಮಾಡಿದ್ದು ಅನಂತರ ಸಾಕಷ್ಟು ಕಡೆ ಸುತ್ತಾಡಿಸಿ ಕೊನೆಗೆ ಕಾರಿನಲ್ಲಿಯೇ ಚೆಲುವನ ಕತ್ತು ಕೊಯ್ದು ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಎಸೆದು ಪರಾರಿಯಾಗಿದ್ದಾರೆ.
ಅಂ ಹಳ್ಳದ ಬಳಿ ಮೃತದೇಹವನ್ನು ಕಂಡು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಅಲ್ಲದೇ ಆತನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಚೆಲುವನನ್ನು ಹತ್ಯೆ ಮಾಡಿದ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.


