ಬೆಳ್ತಂಗಡಿ: ಮೆದುಳಿನ ರಕ್ತ ಸ್ರಾವದಿಂದ ಯುವತಿಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮನೆಯವರು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಅಂಗಾಂಗ ಮೈಸೂರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಸುಳ್ಯದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದ ರೀತಿಯಲ್ಲಿ ಸುಳ್ಯದ ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರು ಸಹಕಾರ ನೀಡಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದರು.

ಸುಳ್ಯದ ರಥಬೀದಿ ನಿವಾಸಿಯಾಗಿದ್ದ ಮಮತಾ ಎಂಬವರ ಪುತ್ರಿ ಸಿಂಧು ಮೃತಪಟ್ಟ ಯುವತಿ. ಪುತ್ತೂರು ಆದರ್ಶ ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದ ಸಿಂಧು ಡಿ. 16 ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್ ನಲ್ಲಿ ಬರುತ್ತಿದ್ದ ವೇಳೆ ಅಡ್ಯಾರ್ ನಲ್ಲಿ ಬಸ್ ನ ಸೀಟಿನಿಂದ ಜಾರಿ ಬಿದ್ದರೆನ್ನಲಾಗಿದೆ.
ಬಸ್ ನಲ್ಲಿದ್ದವರು ಆಕೆಯನ್ನು ಹಿಡಿದುಕೊಂಡರು. ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ನರದ ಸಮಸ್ಯೆ ಉಂಟಾಗಿರುವುದು ತಿಳಿದುಬಂತು.

ಮರುದಿನ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫರ್ಸ್ಟ್ ನ್ಯೂರೋ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮೆದುಳಿನ ರಕ್ತ ಸ್ರಾವ ಉಂಟಾದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕ ಒಮ್ಮೆ ಪ್ರಜ್ಞೆ ಬಂದಿತ್ತಾದರೂ ಬಳಿಕ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದರು.
ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೂ, ಯಂತ್ರಗಳ ಸಹಾಯದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್, ಕಣ್ಣುಗಳು ಮುಂತಾದ ಪ್ರಮುಖ ಅಂಗಗಳನ್ನು ಉಳಿಸಬಹುದಾಗಿದೆ. ಈ ಅಂಗಗಳನ್ನು ದಾನ ಮಾಡುವುದರಿಂದ ಇತರರಿಗೆ ಜೀವದಾನ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಯಿ ಮಮತಾ ಅವರು ಮನೆಯವರೊಂದಿಗೆ ಚರ್ಚಿಸಿ ಅಂಗಾಂಗಗಳನ್ನು ದಾನಮಾಡುವ ನಿರ್ಧಾರ ಮಾಡಿದರು. ಅದರಂತೆ ಮೈಸೂರಿನ ಅಪೋಲೋ ಆಸ್ಪತ್ರೆ, ನಿಟ್ಟೆ,ಎ.ಜೆ. ಮತ್ತು ಕೆ.ಎಂ.ಸಿ. – ಆಸ್ಪತ್ರೆಗಳಿಗೆ ಅಂಗಾಂಗ ದಾನ ಮಾಡಲಾಗಿತ್ತು.




