ಬಂಟ್ವಾಳ : ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಕಟ್ಟೆಮನೆ ಎಂಬಲ್ಲಿ ಡಿ.29ರಂದು ನಡೆದ ಬೈಕ್ ಹಾಗೂ ನ್ಯಾನೋ ಕಾರು ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಬಂಟ್ವಾಳ ತಾಲೂಕು ಕುಕ್ಕಾಜೆ ನಿವಾಸಿ ಇಮ್ರಾನ್ ಯಾನೆ ಎಸ್ ಎ ಮೊಹಮ್ಮದ್ ತ್ವಾಹ (40 ವ.) ಮೃತ ದುರ್ದೈವಿ.
ಇಮ್ರಾನ್ ಟಾಟಾ ಕಂಪನಿಯ ಡಿಶ್ ರಿಪೇರಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯ ನಿಮಿತ್ತ ತೆರಳಿದವರು ವಾಪಾಸು ಬಿ.ಸಿ.ರೋಡ್ ಕಡೆ ಬರುತ್ತಿದ್ದರು.
ಇದೇ ವೇಳೆ ಮಂಗಳೂರು ಕಡೆಯಿಂದ ಪೊಲೀಸ್ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಡಿ.ಸಿ.ಆರ್.ಇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದ ನ್ಯಾನೋ ಕಾರು ನಿಯಂತ್ರಣ ತಪ್ಪಿ ಹೆಗ್ಗಡೆಬೆಟ್ಟು ಮನೆ ಬಳಿ ಬೈಕ್ ಗೆ ಢಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಇಮ್ರಾನ್ ಬೈಕ್ ನಿಂದ ಎಸೆಯಲ್ಪಟ್ಟಿದ್ದು, ಬೈಕ್ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಇಮ್ರಾನ್ ರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.




