ಬೆಳಾಲು: ನಾಪತ್ತೆಯಾಗಿದ್ದ ಬೆಳಾಲು ಗ್ರಾಮದ ಪುರುಷರಬೆಟ್ಟು ನಿವಾಸಿಯೊಬ್ಬರು ಇಂದು ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.

ಘಟನೆಯ ವಿವರ: ಬೆಳಾಲು ಗ್ರಾಮದ ಪುರುಷರಬೆಟ್ಟು ನಿವಾಸಿ ರಾಜೇಶ್ ಪಿ. (30 ವರ್ಷ) ಎಂಬುವವರೇ ಮೃತಪಟ್ಟ ಯುವಕ. ಡಿಸೆಂಬರ್ 27ರಂದು ಬೆಳಿಗ್ಗೆ ಮನೆಯಿಂದ ಹೊರಗೆ ಹೋದ ರಾಜೇಶ್ ಅವರು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಆತಂಕಗೊಂಡ ಮನೆಯವರು ಮತ್ತು ಸ್ಥಳೀಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.ರಾಜೇಶ್ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಸ್ಥಳೀಯರು ಸತತವಾಗಿ ಹುಡುಕಾಟ ಮುಂದುವರಿಸಿದ್ದರು. ಆದರೆ, ಇಂದು (ಡಿಸೆಂಬರ್ 30) ಬೆಳಿಗ್ಗೆ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ರಾಜೇಶ್ ಅವರ ಶವ ಪತ್ತೆಯಾಗಿದೆ.


ನದಿಯಲ್ಲಿ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.



