ಸವಣೂರು: ಕಡಬ ತಾಲೂಕಿನ ಸವಣೂರು ಗ್ರಾಮದ ಅಗರಿ ನಿವಾಸಿ ರಾಮಚಂದ್ರ ಎಂಬವರ ಪುತ್ರ ಮೇಘರಾಜ್ (24) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಡಿಸೆಂಬರ್ 25ರಂದು ಮೇಘರಾಜ್ ಅವರು ತಮ್ಮ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಪರಿಸ್ಥಿತಿ ಗಂಭೀರವಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು.

ವೈದ್ಯರ ಸಲಹೆಯ ಹೊರತಾಗಿಯೂ ಮೇಘರಾಜ್ ಅವರು ಹೆಚ್ಚಿನ ಚಿಕಿತ್ಸೆ ಪಡೆಯಲು ನಿರಾಕರಿಸಿ ಅಂದು ಮನೆಗೆ ಮರಳಿದ್ದರು ಎನ್ನಲಾಗಿದೆ. ಆದರೆ, ಡಿಸೆಂಬರ್ 28ರಂದು ಮನೆಯಲ್ಲಿ ವಿಪರೀತ ವಾಂತಿ ಮಾಡಿಕೊಂಡು ಮತ್ತೆ ಅಸ್ವಸ್ಥಗೊಂಡಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆತಂದಿದ್ದರು.
ಆದರ್ಶ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಕೂಡಲೇ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆಯೆಂದು ತಿಳಿಸಿದ ಹಿನ್ನೆಲೆಯಲ್ಲಿ, ಅವರನ್ನು ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೇಘರಾಜ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಮೃತ ಮೇಘರಾಜ್ ಅವರ ತಂದೆ ರಾಮಚಂದ್ರ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



